ವಿದ್ಯಾರ್ಥಿಗಳ ಮನೆಗೇ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಕುರಿತು ಪಾಲಕರಲ್ಲಿ ಮಾಹಿತಿ ಪಡೆಯುತ್ತಿರುವ ಇಲಾಖಾ ಅಧಿಕಾರಿಗಳು. 
ಉಡುಪಿ

ದ್ವಿತೀಯದಿಂದ 'ಪ್ರಥಮ'ದತ್ತ ಚಿತ್ತ

* ಎಸ್​ಎಸ್​ಎಲ್​ಸಿಯಲ್ಲಿ ಮತ್ತೆ 'ಫಸ್ಟ್​' ತವಕ

* ಯಶ ತಂದೀತೇ ಮಕ್ಕಳ ಬರಹದ ಕೈಚಳಕ?

ಪ್ರಶಾಂತ ಭಾಗ್ವತ ಉಡುಪಿ
ವಿದ್ಯಾರ್ಥಿ ಜೀವನದ ಪ್ರಥಮ 'ಮೈಲಿಗಲ್ಲು' ಎಂದೇ ಬಿಂಬಿತವಾದ ಎಸ್​ಎಸ್​ಎಲ್​ಸಿ ಪರೀಕ್ಷೆ ಮಾ.18ರಿಂದ ಏ.2ರ ವರೆಗೆ ನಡೆಯಲಿದ್ದು, ಪ್ರತಿಶತ 100 ಫಲಿತಾಂಶ ಗಳಿಸಿ ರಾಜ್ಯದಲ್ಲಿ ಮತ್ತೆ ಪ್ರಥಮ ಸ್ಥಾನಕ್ಕೇರಲು ಜಿಲ್ಲೆಯ ಶಿಕ್ಷಣ ಇಲಾಖೆ ಕಾರ್ಯಯೋಜನೆ ನಡೆಸಿದೆ.
ಕಳೆದ ಹತ್ತು ವರ್ಷದಲ್ಲಿ 4 ಬಾರಿ ಪ್ರಥಮ, 2 ಬಾರಿ ದ್ವಿತೀಯ ಹಾಗೂ 2 ಬಾರಿ ಟಾಪ್​ ಟೆನ್​ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದ ಉಡುಪಿ ಜಿಲ್ಲೆ, ಈ ಬಾರಿಯೂ ಮತ್ತೆ 'ಫಸ್ಟ್​ ಪ್ಲೇಸ್​'ನತ್ತ ಚಿತ್ತ ನೆಟ್ಟಿದೆ. ಅದಕ್ಕೆಂದೇ ಇಲಾಖೆ ಹಲವು ರೀತಿಯಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಿದ್ದು, ಮಕ್ಕಳೂ ಸಹ ನಿರಾತಂಕವಾಗಿ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.

ಕೈಗೊಂಡ ಕ್ರಮವೇನು?

2025-26ನೇ ಸಾಲಿನ ಶೈಕ್ಷಣಿಕ ದಿನದ ಆರಂಭದಿಂದಲೇ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಎಸ್​ಎಸ್​ಎಲ್​ಸಿ ಮಕ್ಕಳಿಗೆ ವಿಶೇಷ ತರಗತಿ ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರೂ ಹೆಚ್ಚು ಅಂಕ ಗಳಿಸುವ ರೀತಿಯಲ್ಲಿ ವಿಷಯವಾರು ಹೆಚ್ಚುವರಿ ಕ್ಲಾಸ್​ ನಡೆಸಲಾಗಿದೆ. ಯಾವ ಮಕ್ಕಳೂ ಅನಗತ್ಯವಾಗಿ ಶಾಲೆ ತಪ್ಪಿಸದಂತೆ ಹಾಗೂ ಕಲಿಕೆಯಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಲಾಗಿದೆ.

ಶಿಕ್ಷಕರಿಗೂ ತರಬೇತಿ

ಪರೀಕ್ಷೆ ಇರುವುದು ಮಕ್ಕಳಿಗೇ ಆದರೂ ಅವರ ತಂದೆ-ತಾಯಿಯೂ ಸಹ ಜವಾಬ್ದಾರಿ ನಿಭಾಯಿಸುವ ದೃಷ್ಟಿಯಿಂದ ಸರ್ಕಾರದ ನಿರ್ದೇಶನದಂತೆ ಪಾಲಕರು-ಶಿಕ್ಷಕರ ಮೂರು ಮಹಾಸಭೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಈ ಹಂತ ಎಷ್ಟು ಪ್ರಮುಖ ಎನ್ನುವುದು ಮನದಟ್ಟಾಗಲು ಶಾಲೆಗಳಿಗೆ ಶಿಕ್ಷಣ ತಜ್ಞರು, ಮನೋವೈದ್ಯರನ್ನು ಕರೆಸಿ ಅವರಿಂದ ಪೂರಕ ಮಾರ್ಗದರ್ಶನ ಮಾಡಿಸಲಾಗಿದೆ. ಶಿಕ್ಷಕರ ಪಾತ್ರ ಪ್ರಮುಖ ಆಗಿರುವುದರಿಂದ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಿಗೂ ಡಯಟ್​ ವತಿಯಿಂದ 'ಪ್ರೇರಣಾ' ತರಬೇತಿ ನೀಡಲಾಗಿದೆ. 

ಟಿವಿ, ಆಕಾಶವಾಣಿಯಲ್ಲಿ ಸಂವಾದ

ಎಸ್​ಎಸ್​ಎಲ್​ಸಿ ಪರೀಕ್ಷೆ ವಿಚಾರದಲ್ಲಿ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ಸಂದೇಹ ಇದ್ದರೆ ನಿವಾರಿಸುವ ನಿಟ್ಟಿನಲ್ಲಿ ಮಣಿಪಾಲ ಆಕಾಶವಾಣಿಯ ಮೂಲಕ 3 ಬಾರಿ ಜಿಲ್ಲಾ ಮಟ್ಟದ ನೇರ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ಥಳೀಯ ಟಿವಿ ಚಾನಲ್​ಗಳ ಮೂಲಕ ಒಟ್ಟು 15 ಲೈವ್​ ಕಾರ್ಯಕ್ರಮ ನಡೆಸಲಾಗಿದೆ. ಡಿಡಿಪಿಐ, ಬಿಇಒ ಹಾಗೂ ವಿಷಯ ಸಂಪನ್ಮೂಲ ಶಿಕ್ಷಕರು ಪಾಲ್ಗೊಂಡು ಸೂಕ್ತ ಮಾರ್ಗದರ್ಶನವನ್ನೂ ಮಾಡಿದ್ದಾರೆ.

ಹತ್ತು ವರ್ಷದ ಲಿತಾಂಶ ವಿವರ

ಕ್ರ.ಸಂ.         ವರ್ಷ         ಫಲಿತಾಂಶ %            ಸ್ಥಾನ
1)              2015           93.37                    1
2)              2016           89.64                    2
3)              2017           84.23                    1
4)              2018           88.30                    1
5)              2019           89.49                    5
6)              2020           86.48                    9
7)              2021          100                    ಕರೊನಾ
8)              2022           89.46                  13
9)              2023           91.00                  17
10)            2024           88.69                  1
11)            2025           89.96                   2  
"

ಉಡುಪಿ ಜಿಲ್ಲೆಯ 51 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಒಟ್ಟು 14,151 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆ, ತಾಲೂಕು, ಹೋಬಳಿ ಹಂತದ ಎಲ್ಲ ಅನುಷ್ಠಾನಾಧಿಕಾರಿಗಳು ಶಾಲೆ, ಮನೆ ಹಾಗೂ ಹಾಸ್ಟೆಲ್​ಗಳಿಗೆ ಭೇಟಿ ಮಾಡಿ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಸಂವಾದದ ಮೂಲಕ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಕಳೆದ ವರ್ಷ ಉಡುಪಿ ಜಿಲ್ಲೆ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ್ದು, ಈ ವರ್ಷ ಪ್ರಥಮ ಸ್ಥಾನ ಗಳಿಸಲು ಎಲ್ಲ ರೀತಿಯಲ್ಲೂ ಇಲಾಖೆಯ ವತಿಯಿಂದ ಶೈಕ್ಷಣಿಕ ಚಟುವಟಿಕೆ ನಡೆಸಿದ್ದೇವೆ.