ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವಂತೆ ಜಿಲ್ಲಾ ಎಸ್ಟಿ ಮೋರ್ಚಾ ಪದಾಧಿಕಾರಿಗಳು ಡಿಸಿ ಸ್ವರೂಪಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಭುಜಂಗ ನಾಯ್ಕ್, ದಿನಕರ್ ಶೆಟ್ಟಿ ಹೆರ್ಗ, ಶ್ರೀಕಾಂತ ನಾಯಕ್, ಮಧುಕರ್ ಮುದ್ರಾಡಿ, ಸತ್ಯಾನಂದ ನಾಯಕ್, ಉಮೇಶ್ ನಾಯ್ಕ್ ಚೇರ್ಕಾಡಿ, ರಮೇಶ್ ನಾಯ್ಕ್ ಕೊಡ್ಲಾಡಿ ಇತರರಿದ್ದರು.
* ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಭುಜಂಗ ನಾಯ್ಕ್ ಆಗ್ರಹ
* ಜಿಲ್ಲಾಧಿಕಾರಿ ಸ್ವರೂಪಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
ಉಡುಪಿ: ರಾಜ್ಯದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ವಾಲ್ಮೀಕಿ ನಿಗಮದಿಂದ ಮೀಸಲಿಟ್ಟಿದ್ದ ಅನುದಾನವನ್ನು ಈ ಹಿಂದೆ ದುರುಪಯೋಗ ಮಾಡಿದ್ದ ಹಾಗೂ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಮತ್ತೆ ಸಚಿವರಾಗಿರುವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಬೇಕು. ಭ್ರಷ್ಟರಿಗೆ ಹಾಗೂ ವಿಚಾರಣೆ ಎದುರಿಸತ್ತಿರುವ ಅವರಿಂದ ಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡಲೇ ರಾಜೀನಾಮೆ ಪಡೆಯಬೇಕು ಎಂದು ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಭುಜಂಗ ನಾಯ್ಕ್ ಮಣಿಪಾಲ ಆಗ್ರಹಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ನಿಯೋಗದೊಂದಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
187 ಕೋಟಿ ರೂ. ಅವ್ಯವಹಾರ
ಎರಡು ವರ್ಷದ ಹಿಂದೆ ತೆಲಂಗಾಣ ರಾಜ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ವಾಲ್ಮೀಕಿ ನಿಗಮದಲ್ಲಿ ಭಾರಿ ಭ್ರಷ್ಟಾಚಾರ ನಡೆದಿತ್ತು. ಅಲ್ಲಿ ಮೀಸಲಿಟ್ಟಿದ್ದ ಸುಮಾರು 187 ಕೋಟಿ ರೂ.ವನ್ನು ಅಂದು ಇಲಾಖೆ ಸಚಿವರಾಗಿದ್ದ ಬಿ.ನಾಗೇಂದ್ರ ಸೂಚನೆಯ ಮೇರೆಗೆ ಅಕ್ರಮವಾಗಿ ಬೇರೆ ಬೇರೆ ಖಾಸಗಿ ಖಾತೆಗಳಿಗೆ ವರ್ಗಾಯಿಸಲಾಗಿದೆ. ನಿಗಮದಲ್ಲಿ ಹಗರಣ ಆಗಿರುವುದನ್ನು ಹಿಂದಿನ ಸಿಎಂ ಸಿದ್ದರಾಮಯ್ಯ ಅವರೂ ಸಹ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಸಮುದಾಯಕ್ಕೆ ಅನ್ಯಾಯ
ಸಚಿವ ನಾಗೇಂದ್ರ ವಿರುದ್ಧ ಸಿಬಿಐ ಅಧಿಕಾರಿಗಳು ಮೂರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಜಾರಿ ನಿರ್ದೇಶನಾಲಯವೂ ಸಹ ಒಂದು ಚಾರ್ಜ್ಶೀಟ್ ಸಲ್ಲಿಸಿದೆ. ಬಳಿಕ ನಾಗೇಂದ್ರ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ನಂತರ ಜಾಮೀನನ ಮೇಲೆ ಬಿಡುಗಡೆಗೊಂಡಿದ್ದಾರೆ. ಬೃಹತ್ ಭ್ರಷ್ಟಾಚಾರದ ಆರೋಪ ಹೊತ್ತಿದ್ದರೂ, ನಿಗಮದಲ್ಲಿ ಅವ್ಯವಹಾರ ಆಗಿದ್ದು ತಿಳಿದಿದ್ದರೂ ಸಹ ಈಗಿನ ಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ ನೀಡಿದ್ದಾರೆ. ಇದು ನಮ್ಮ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಎಂದರು. ಕೂಡಲೇ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದಿನಕರ್ ಶೆಟ್ಟಿ ಹೆರ್ಗ, ಶ್ರೀಕಾಂತ ನಾಯಕ್, ಜಿಲ್ಲಾ ವಕ್ತಾರ ಮಧುಕರ್ ಮುದ್ರಾಡಿ, ಸತ್ಯಾನಂದ ನಾಯಕ್, ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ, ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ರಮೇಶ್ ನಾಯ್ಕ್ ಕೊಡ್ಲಾಡಿ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ನಾಯ್ಕ್ ನೂಜಿನಬೈಲು, ಸುಭಾಸ್ ನಾಯ್ಕ್ ಪೆರ್ಡೂರ್, ನಗರ ಎಸ್ಟಿ ಮೋರ್ಚಾ ಅಧ್ಯೆ ಸುಮಲತಾ ನಾಯ್ಕ್, ಉಪಾಧ್ಯಕ್ಷ ನವೀನ್ ನಾಯ್ಕ್, ಪಧಾನ ಕಾರ್ಯದರ್ಶಿ ಸುಗುಣ ನಾಯ್ಕ್ ಇದ್ದರು.