ಅನಗತ್ಯ ವಿದ್ಯುತ್ ಬಿಲ್ ಬಾಕಿ ಹಾಗೂ ಕಾರ್ಮಿಕರಿಗೆ ಶೇ.60 ವೇತನ ಹೆಚ್ಚಳ ವಿರೋಧಿಸಿ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಎಂ. ವಸಂತ್ ಕಿಣಿ ಮೂಲಕ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು.
* ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಆಗ್ರಹ
* ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ
ಉಡುಪಿ: ಸರ್ಕಾರ ಕೈಗೊಂಡ ಎರಡು ನಿರ್ಧಾರವನ್ನು ವಿರೋಧಿಸಿ ಹಾಗೂ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರ ಮೂಲಕ ಸರ್ಕಾರಕ್ಕೆ ತಕರಾರು ಪತ್ರ ಸಲ್ಲಿಸಿದರು.
ವಿದ್ಯುತ್ ಬಿಲ್ ಬಾಕಿಯೆಂಬ ಅನಗತ್ಯ ಹೇರಿಕೆ ಹಾಗೂ ಕಾರ್ಮಿಕರಿಗೆ ಶೇ.60 ವೇತನ ಹೆಚ್ಚಳ ಮಾಡುವಂತೆ ಆದೇಶಿಸಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ. ವಸಂತ್ ಕಿಣಿ ತಿಳಿಸಿದರು.
ವಿದ್ಯುತ್ ಬಾಕಿ ಇಲ್ಲ
ಮೊದಲನೆಯದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2026ರ ಮಾ.3ರಂದು ನೀಡಿದ ಆದೇಶದಂತೆ ಎಲ್ಲ ಕೈಗಾರಿಕೆಗಳು 2025-26ನೇ ಸಾಲಿನಲ್ಲಿ ಬಾಕಿ ಇದೆ ಎಂದು ಬಿಲ್ ಕಳುಹಿಸಿರುತ್ತಾರೆ. ನಾವು ಆದೇಶ ಪರಿಶೀಲಿಸಿದಾಗ ಕೃಷಿ ಪಂಪ್ಸೆಟ್ಗಳಿಗೆ ಕರ್ನಾಟಕ ಸರ್ಕಾರ ಧನ ಸಹಾಯ ಬಿಡುಗಡೆ ಮಾಡಬೇಕಿತ್ತು. ಆದರೆ, ಆ ಸಹಾಯ ಧನ ಬಿಡುಗಡೆ ಮಾಡದೆ ಅದರ ಹೊರೆಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಮಳಿಗೆಗಳ ಮೇಲೆ ಹೇರಿದ್ದಾರೆ. ಇದು ನಮ್ಮ ಕೈಗಾರಿಕೆಗಳ ಮೇಲೆ ಮಾಡಿದ ಅನ್ಯಾಯ. ಹಿಂಬಾಕಿ ಆದೇಶ ಕೂಡಲೇ ಹಿಂಪಡೆದು, ನಾವು ಉಪಯೋಗಿಸಿದ ವಿದ್ಯುಚ್ಛಕ್ತಿಯ ದರ ಮಾತ್ರ ವಸೂಲಿ ಮಾಡುವಂತೆ ಮೆಸ್ಕಾಂ ಘಟಕಕ್ಕೆ ಆದೇಶಿಸಬೇಕು ಎಂದರು.
ಉದ್ದಿಮೆಗಳಿಗೆ ಆರ್ಥಿಕ ಹೊರೆ
ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ ವೇತನ ಶೇ.60 ಹೆಚ್ಚಿಸಲು ಹೇಳಿರುವುದಕ್ಕೆ ನಮ್ಮ ವಿರೋಧವಿದೆ. ಕಾರ್ಮಿಕರ ವೇತನವನ್ನು ಎಲ್ಲ ಕೈಗಾರಿಕೆ ಉದ್ಯಮಗಳು ಪ್ರತಿವರ್ಷ ಹೆಚ್ಚಿಸುತ್ತಲೇ ಬಂದಿದೆ. ಆದರೂ ಈಗ ಏಕಾಏಕಿ ಶೇ.60 ವೇತನ ಹೆಚ್ಚಳ ಮಾಡಿದ್ದು ಎಂಎಸ್ಎಂಇ ವಲಯದ ಉದ್ದಿಮೆಗಳಿಗೆ ಹೊರೆಯಾಗುತ್ತಿದೆ ಎಂದು ತಿಳಿಸಿದರು.
ಉದ್ಯಮಕ್ಕೆ ನಷ್ಟ ಸಾಧ್ಯತೆ
ಈಗಾಗಲೇ ಎಲ್ಲ ಕೈಗಾರಿಕೆಗಳು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರವ ಯುದ್ಧದ ವೈಪರೀತ್ಯದಿಂದ ಡೀಸೆಲ್ ಬೆಲೆ ಏರಿಕೆ ಹಾಗೂ ಸಾಗಾಟ ವೆಚ್ಚ, ಕಚ್ಚಾವಸ್ತುಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕ ವೇತನ ಶೇ.60 ಹೆಚ್ಚಿಸಿದರೆ ನಮ್ಮ ಕೈಗಾರಿಕೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ. ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳು ತರಬೇತಿ ಕೇಂದ್ರವಿದ್ದಂತೆ. ಕನಿಷ್ಠ ವೇತನ ಹೆಚ್ಚಳದಿಂದ ನೇಮಕಾತಿ ಕಡಿಮೆ ಮಾಡಿದರೆ ನಿರುದ್ಯೋಗ ಪ್ರಮಾಣ ಹೆಚ್ಚಬಹುದು. ಹೀಗಾಗಿ ಈ ವಲಯದ ಉದ್ದಿಮೆಗಳ ನೆರವಿಗೆ ಸರ್ಕಾರ ಬರಬೇಕು ಎಂದು ವಿನಂತಿಸಿದರು.
ಡಿಸಿ ಸ್ವರೂಪಾ ಟಿ.ಕೆ. ಮನವಿ ಸ್ವೀಕರಿಸಿದರು. ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು ಇದ್ದರು.