ಕ್ರಿಸ್ಮಸ್ ಹಾಗೂ ವರ್ಷಾಂತ್ಯ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರಿಂದ ಭರ್ತಿಯಾಗಿರುವ ಮಲ್ಪೆ ಬೀಚ್.
* ದೇಗುಲಗಳಲ್ಲಿ ಲಕ್ಷಾಂತರ ಭಕ್ತರ ಸರದಿ ಸಾಲು
* ಕಡಲ ತೀರಗಳಲ್ಲಿ ಸಂಭ್ರಮದ ಹೊನಲು
* ಉಡುಪಿ ನಗರದಲ್ಲಿ ವಾಹನ ದಟ್ಟಣೆ
* ಸುಗಮ ಸಂಚಾರಕ್ಕೆ ದಿನವೂ ಬವಣೆ
ಕ್ಯಾಲೆಂಡರ್ ವರ್ಷಾಂತ್ಯ, ಶಾಲಾ-ಕಾಲೇಜುಗಳ ವಾರ್ಷಿಕ ಪ್ರವಾಸ ಹಾಗೂ ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ವಿವಿಧ ರಾಜ್ಯಗಳ ಯಾತ್ರಿಕರು ಹಾಗೂ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ ಸೇರಿದಂತೆ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಕಳೆದ ಒಂದು ವಾರದಿಂದ ದಿನವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ದೇಗುಲಗಳಲ್ಲಿ ಕಾಲಿಡಲೂ ಸ್ಥಳಾವಕಾಶ ಇಲ್ಲದಷ್ಟು ಜನರು ಸೇರತೊಡಗಿದ್ದು, ದೇವರ ದರ್ಶನಕ್ಕೆ ಬೆಳಗ್ಗೆಯಿಂದ ರಾತ್ರಿಯವರೆಗೂ ಸರದಿ ಸಾಲು ಅಂತ್ಯಕಾಣದಾಗಿದೆ.
ಹೆಚ್ಚಿದ ಯಾತ್ರಿಕರ ಸಂಖ್ಯೆ
ರಜೆಯ ಹಿನ್ನೆಲೆಯಲ್ಲಿ ಉಡುಪಿಗೆ ಬರುವ ಯಾತ್ರಿಕರ ಸಂಖ್ಯೆಯೂ ಹೆಚ್ಚಿದೆ. ಶಬರಿಮಲೈಗೆ ಹೋಗುವ ಅಯ್ಯಪ್ಪ ಮಾಲಾಧಾರಿಗಳು ದೇವರ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ ದೇವಳ, ಆನೆಗುಡ್ಡೆ ದೇವಸ್ಥಾನ, ಬ್ರಹ್ಮಾವರದ ಗುರುನರಸಿಂಹ ದೇಗುಲ, ಮಂದಾರ್ತಿ, ಕಾಪು ಮಾರಿಗುಡಿ ಸೇರಿದಂತೆ ಕೋಟ, ಕುಂದಾಪುರ ತಾಲೂಕಿನ ಪ್ರಮುಖ ದೇವಳದಲ್ಲಿ ಭಕ್ತರ ಸಾಗರವೇ ಹರಿಯುತ್ತಿದೆ. ಜಿಲ್ಲೆಯ ಬಹುತೇಕ ಲಾಡ್ಜ್ಗಳು, ಹೋಮ್ಸ್ಟೇ, ರೆಸಾರ್ಟ್ಗಳು ಭರ್ತಿಯಾಗಿದ್ದು, ದಿನವೂ ಆಗಮಿಸುತ್ತಿರುವ ಪ್ರವಾಸಿಗರಿಗೆ ಒಂದೂ ರೂಮ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಹನ ದಟ್ಟಣೆಯ ಗೋಳು
ಉಡುಪಿ ನಗರದಲ್ಲಿ ವಾರದಿಂದ ದಿನಪೂರ್ತಿ ವಾಹನ ದಟ್ಟಣೆ ಕಂಡುಬರುತ್ತಿದೆ. ಭಾರಿ ಪ್ರಮಾಣದಲ್ಲಿ ಪ್ರವಾಸಿ ವಾಹನಗಳು ಬರುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಲಿದೆ. ಉಡುಪಿ&ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಂತೂ ವಾಹನಗಳ ಭರಾಟೆ ಹೆಚ್ಚಿದೆ. ಉಡುಪಿಯ ಪ್ರಮುಖ ವೃತ್ತವಾದ ಕಲ್ಸಂಕದಲ್ಲಿ ಸುಗಮ ಸಂಚಾರಕ್ಕೆ ಸಿಗ್ನಲ್ ಅಳವಡಿಸಿದ್ದರೂ ಸಹ ಹೆಚ್ಚಿದ ವಾಹನಗಳಿಂದಾಗಿ ಸಂಚಾರ ಕಿರಿಕಿರಿ ತಪ್ಪುತ್ತಿಲ್ಲ. ಕರಾವಳಿ ಬೈಪಾಸ್ನಿಂದ ಮಲ್ಪೆ ಬೀಚ್ವರೆಗೆ ಹೆದ್ದಾರಿ ಕಾಮಗಾರಿಯೂ ನಡೆದಿದ್ದು, ವಾಹನ ದಟ್ಟಣೆ ಹೇಳತೀರದಾಗಿದೆ.
ನಗರದಲ್ಲಿ ಪಾರ್ಕಿಂಗ್ ಸಮಸ್ಯೆ
ಪಾರ್ಕಿಂಗ್ ಮಾಡಲು ಇರುವ ಸ್ಥಳಗಳೆಲ್ಲ ಭರ್ತಿಯಾಗಿದ್ದರಿಂದ ಪ್ರತಿಕ್ಷಣವೂ ಆಗಮಿಸುತ್ತಲೇ ಇರುವ ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್ ಮಾಡಲು ಸ್ಥಳ ಇಲ್ಲದಾಗಿದೆ. ಕುಟುಂಬ ಸಮೇತ ಬರುತ್ತಿರುವ ಪ್ರವಾಸಿಗರಿಗೆ ವಾಹನ ಎಲ್ಲಿ ನಿಲ್ಲಿಸಬೇಕು ಎನ್ನುವುದೇ ತಿಳಿಯದಾಗಿದೆ. ಕಂಡಕಂಡಲ್ಲಿ ವಾಹನ ನಿಲ್ಲಿಸಿ ದೇಗುಲಗಳಿಗೆ ತೆರಳುತ್ತಿದ್ದಾರೆ. ಉಡುಪಿ ರಾಜಾಂಗಣದ ಹಿಂಬದಿಯ ಪಾರ್ಕಿಂಗ್ ಪ್ರದೇಶ ಭರ್ತಿಯಾಗಿಯೇ ಇರುತ್ತಿದೆ. ಸಮೀಪದಲ್ಲಿರುವ ಖಾಸಗಿಯವರ ಜಾಗದಲ್ಲಿ ವ್ಯವಸ್ಥೆ ಮಾಡಿದ್ದರೂ ಅದೂ ಸಹ ಪ್ರವಾಸಿ ವಾಹನದಿಂದ ತುಂಬಿ ಹೋಗಿದೆ.
ಮಲ್ಪೆ ಬೀಚ್ನಲ್ಲಿ ಜನಜಂಗುಳಿ
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಮಲ್ಪೆ ಬೀಚ್ನಲ್ಲಿ ಜನಪ್ರವಾಹ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಜನಸಾಗರವೇ ಹರಿದು ಬರುತ್ತಿದ್ದು, ಭಾನುವಾರವಾಗಿದ್ದರಿಂದ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದು, 'ರಜಾ-ಮಜಾ' ಅನುಭವಿಸುತ್ತಿದ್ದಾರೆ. ಮಲ್ಪೆ ಬೀಚ್, ಸೀವಾಕ್ನಲ್ಲಿ ಜನಜಂಗುಳಿಯಿಂದ ಕೂಡಿದೆ. ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಲು ಇಲ್ಲಿ ಬೋಟ್ ವ್ಯವಸ್ಥೆಯೂ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಸಂಭ್ರಮಿಸುತ್ತಿದ್ದಾರೆ. ಜಿಲ್ಲೆಯ ವಿವಿಧ ಕಡಲ ಕಿನಾರೆಗಳಾದ ಕಾಪು, ಪಡುಬಿದ್ರೆ, ಪಡುಕೆರೆ, ತ್ರಾಸಿಗಳಲ್ಲಿ ಪ್ರವಾಸಿಗರು ದಾಳಿ ಮಾಡಿದಂತೆ ಭಾಸವಾಗುತ್ತಿದೆ.
ನಾವು ಕೃಷ್ಣನ ದರ್ಶನಕ್ಕೆಂದು ಕುಟುಂಬ ಸಮೇತರಾಗಿ ಉಡುಪಿ ಮಠಕ್ಕೆ ಬಂದಿದ್ದೇವೆ. ಇಲ್ಲಿ ನಮ್ಮ ಕಾರು ಪಾರ್ಕ್ ಮಾಡಲೂ ಸ್ಥಳ ಇಲ್ಲದಷ್ಟು ಯಾತ್ರಿಕರ ವಾಹನವಿದೆ. ದೇಗುಲದೊಳಗೆ ಹೋಗಲೂ ಕೀಲೋಮೀಟರ್ ಉದ್ದದ ಸಾಲು ಇದೆ. ದೇವರ ದರ್ಶನಕ್ಕೆ ಐದಾರು ತಾಸಿನಿಂದ ಕಾಯುತ್ತಿದ್ದೇವೆ.
ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಹತ್ತು ವಾಹನ ನಿಲ್ಲುವ ಕಡೆ ನೂರಾರು ವಾಹನ ಬರುತ್ತಿದ್ದು ಸಹಜವಾಗಿಯೇ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಪೆರಂಪಳ್ಳಿಯಲ್ಲೂ ರಸ್ತೆ ಕಾಮಗಾರಿ ನಡೆದಿದ್ದು, ಅಲ್ಲಿ ಸಂಚರಿಸುವ ವಾಹನಗಳೂ ಉಡುಪಿ ನಗರದ ಮಾರ್ಗವಾಗಿ ಸಂಚರಿಸುತ್ತಿದೆ. ಶ್ರೀಕೃಷ್ಣ ಮಠದ ಪಾರ್ಕಿಂಗ್ ಜಾಗ ದೊಡ್ಡದಿದ್ದರೂ ಸಾಲದಾಗಿದೆ. ಪಾರ್ಕಿಂಗ್ ಸಮಸ್ಯೆಯಿಂದಾಗಿ ಮಲ್ಪೆಯೂ ಸೇರಿದಂತೆ ಹೆಚ್ಚುವರಿಯಾಗಿ ಐದು ಕಡೆ ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಿದ್ದೇವೆ. ಪ್ರವಾಸಿಗರಿಗೆ ತೊಂದರೆ ಆಗದಂತೆ ವಾಹನ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಿದ್ದೇವೆ. ಜನವರಿ ಮೊದಲ ವಾರದವರೆಗೂ ಪ್ರವಾಸಿಗರ ಸಂಖ್ಯೆ ಹೆಚ್ಚು ಇರಲಿದೆ.