ಉಡುಪಿಯಲ್ಲಿ ನಡೆದ ಪಶ್ಚಿಮ ವಲಯ ಪೊಲೀಸ್ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಐಜಿಪಿ ಚೇತನ್ ಆರ್. ನೀಡಿದ 'ಸರ್ವಾಂಗೀಣ' ಪ್ರಶಸ್ತಿಯನ್ನು ಎಸ್ಪಿ ಹರಿರಾಂ ಶಂಕರ್ ಸ್ವೀಕರಿಸಿದರು. ವಿವಿಧ ಅಧಿಕಾರಿಗಳು ಇದ್ದರು.
* ಪೊಲೀಸರಿಗೆ ಐಜಿಪಿ ಚೇತನ್ ಆರ್. ಕಿವಿಮಾತು
* ಪಶ್ಚಿಮ ವಲಯ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ
ಉಡುಪಿ: ಪೊಲೀಸ್ ಇಲಾಖೆಯ ಕಾರ್ಯ ಇತರ ಇಲಾಖೆಯಂತೆ ಸುಲಭದ ಕೆಲಸವಲ್ಲ. ತಮ್ಮ ದೈನಂದಿನ ಕರ್ತವ್ಯದಲ್ಲಿ ಮೈಮರೆಯಬಾರದು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ತನಿಖೆ ನಡೆಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು ಎಂದು ಪಶ್ಚಿಮ ವಲಯ ಐಜಿಪಿ ಚೇತನ್ ಆರ್. ಕಿವಿಮಾತು ಹೇಳಿದರು.
ಮಣಿಪಾಲ ಮಾಹೆಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಮಂಗಳವಾರ (ಸೆ.1) ಸಾಯಂಕಾಲ ಆಯೋಜಿಸಿದ್ದ ಪಶ್ಚಿಮ ವಲಯದ 8ನೇ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ ಮಂಗಳೂರಿನ ಉಪನಿರ್ದೇಶಕಿ ಸುಜಾತಾ ಕೆ.ಎಂ., ಮಾಹೆಯ ಡಾ. ಅನಿಲ್ ಭಟ್, ಡಾ. ವಿನೋದ್ ಸಿ. ನಾಯಕ್ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸ್ ನಿರೀಕ್ಷಕ ಸೋಮಶಂಕರ್ ಎನ್. ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ಶಿವಾನಂದ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ವಂದಿಸಿದರು.
ನಾಲ್ಕು ಜಿಲ್ಲೆಗಳ 20 ವಿಭಾಗಗಳಲ್ಲಿ ಸ್ಪರ್ಧೆ
ಪೊಲೀಸ್ ಕರ್ತವ್ಯ ಕೂಟದಲ್ಲಿ ಸೈಂಟಿಫಿಕ್ ಏಡ್ಸ್ ಟು ಇನ್ವೆಸ್ಟಿಗೇಷನ್ನ 8 ವಿಭಾಗ, ಗಣಕಯಂತ್ರ ನೈಪುಣ್ಯತೆಯ 3 ವಿಭಾಗ, ಪೋಟೋಗೃಫಿ, ವೀಡಿಯೋಗೃಫಿ, ವಿದ್ವಂಸಕ ಕೃತ್ಯ ತಪಾಸಣೆಯ 4 ವಿಭಾಗ, ಪೊಲೀಸ್ ಶ್ವಾನದಳದ 3 ವಿಭಾಗ ಸೇರಿ ಒಟ್ಟು 20 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಮಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನುರಿತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಪೊಲೀಸ್ಗೆ 'ಸರ್ವಾಂಗೀಣ' ಪ್ರಶಸ್ತಿ
ಉಡುಪಿ ಜಿಲ್ಲೆಯು ಅತಿ ಹೆಚ್ಚು ಪದಕ ಗಳಿಸಿ 'ಸರ್ವಾಂಗೀಣ' ಪ್ರಶಸ್ತಿಗೆ ಭಾಜನವಾಯಿತು. ಅಲ್ಲದೆ, ಉಡುಪಿಯ ಪೊಲೀಸ್ ಶ್ವಾನ ಸ್ನೈಪರ್ ಅತ್ಯುತ್ತಮ ಶ್ವಾನ ಪ್ರಶಸ್ತಿ ಗಳಿಸಿದ್ದು, ಅದರ ಹ್ಯಾಂಡ್ಲರ್ ಹರೀಶ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಕಳೆದ ವರ್ಷ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪದಕಗಳಿಸಿದ್ದ ಉಡುಪಿ ಡಿಎಆರ್ನ ಸಿಬ್ಬಂದಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗಾಗಿ ಪಶ್ಚಿಮ ವಲಯದ ಪೊಲೀಸ್ ಕರ್ತವ್ಯ ಕೂಟದ ನೋಡಲ್ ಅಧಿಕಾರಿ ಗೌರೀಶ್ ಎ.ಸಿ. ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಗೌರವಿಸಲಾಯಿತು.