(ಸಾಂದರ್ಭಿಕ ಚಿತ್ರ) 
ಉಡುಪಿ

ಉಡುಪಿಗೆ ಮತ್ತೆ 'ಪ್ರಥಮ' ಸಂಭ್ರಮ

* ಮೊದಲ ಸ್ಥಾನ ಬಿಟ್ಟುಕೊಡದ ಜಿಲ್ಲೆಯ ವಿದ್ಯಾರ್ಥಿಗಳು

ಪಿಯುಸಿ ಪರೀಕ್ಷೆಯಲ್ಲಿ ಶೇ.96.39 ಫಲಿತಾಂಶ ದಾಖಲು

ಪ್ರಶಾಂತ ಭಾಗ್ವತ ಉಡುಪಿ
ಶೈಕ್ಷಣಿಕ ಸಾಧನೆಯ ಮೂಲಕವೇ ರಾಜ್ಯ-ದೇಶದ ಗಮನ ಸೆಳೆಯುವ ಉಡುಪಿ ಜಿಲ್ಲೆ ಈ ವರ್ಷವೂ ಸಹ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಮತ್ತೊಮ್ಮೆ ಪಾರಮ್ಯ ಮೆರೆದಿದೆ. ಶೇ.96.39 ಫಲಿತಾಂಶ ಗಳಿಸುವ ಮೂಲಕ ತನ್ನ ಮೊದಲ ಸ್ಥಾನವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿದೆ.
ಕಳೆದ ಎರಡು ದಶಕದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಬಿಟ್ಟುಕೊಡದ ಉಡುಪಿ ಜಿಲ್ಲೆಯು 2025ರ ಫಲಿತಾಂಶಕ್ಕಿಂತ ಶೇ.2.49 ಹೆಚ್ಚು ಫಲಿತಾಂಶ ಗಳಿಸುವ ಮೂಲಕ ಮೊದಲ ಸ್ಥಾನ ಕಾಯ್ದುಕೊಂಡಿದೆ.
2010, 2011, 2013, 2017, 2019, 2020ರಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆಯೇ ಪ್ರಥಮ ಸ್ಥಾನ ಗಳಿಸಿತ್ತು. 2025ರಲ್ಲಿ ಮತ್ತೆ ಪ್ರಥಮ ಸ್ಥಾನ ಅಲಂಕರಿಸಿತ್ತು. 2024ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನಕ್ಕೆ ಇಳಿದಿತ್ತು. 
ಕಳೆದ ವರ್ಷ ದಕ್ಷಿಣ ಕನ್ನಡ (ಶೇ.93.57) ಜಿಲ್ಲೆಗಿಂತ ಶೇ.0.33 ಹೆಚ್ಚುವರಿ ಫಲಿತಾಂಶ ಗಳಿಸಿದ್ದ ಉಡುಪಿ ಮೊದಲ ಸ್ಥಾನ ಗಳಿಸಿದ್ದರೆ, ದಕ ಜಿಲ್ಲೆ ದ್ವಿತೀಯ ಸ್ಥಾನದಲ್ಲಿತ್ತು. 2024ರಲ್ಲಿ ಶೇ.96.70 ಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದರೂ 2025ರಲ್ಲಿ ಶೇ.2.8 ಫಲಿತಾಂಶ ಕಡಿಮೆಯಾಗಿದ್ದರೂ ರಾಜ್ಯಕ್ಕೆ ಪ್ರಥಮ ಬಂದಿತ್ತು.
2025ರ ಫಲಿತಾಂಶದ ಕಲಾ ವಿಭಾಗದಲ್ಲಿ 588ರಿಂದ 597 ಅಂಕ ಗಳಿಸಿದ್ದ ರಾಜ್ಯದ 34 ಟಾಪರ್​ಗಳಲ್ಲಿ ಉಡುಪಿ ಜಿಲ್ಲೆಯ ಒಬ್ಬರೂ ಇರಲಿಲ್ಲ. ವಾಣಿಜ್ಯ ವಿಭಾಗದಲ್ಲಿ 594ರಿಂದ 599 ಅಂಕ ಗಳಿಸಿದ್ದ ಉಡುಪಿ ಜಿಲ್ಲೆಯ ಐವರು ಇದ್ದು ಅವರೆಲ್ಲರೂ ವಿದ್ಯಾರ್ಥಿನಿಯರೇ ಆಗಿದ್ದರು. ವಿಜ್ಞಾನ ವಿಭಾಗದಲ್ಲಿ 595ರಿಂದ 599 ಅಂಕ ಗಳಿಸಿದ್ದ ರಾಜ್ಯದ 44 ಟಾಪರ್​ಗಳಲ್ಲಿ ಉಡುಪಿ ಜಿಲೆಯ ಐವರಿದ್ದು, ನಾಲ್ವರು ವಿದ್ಯಾರ್ಥಿನಿಯರೇ ಇದ್ದರು.

ತೇರ್ಗಡೆಯಾದವರ ಮಾಹಿತಿ

ಈ ಬಾರಿ (2026) ಮೊದಲ ಸಲ ಪರೀಕ್ಷೆ ಬರೆದ ಜಿಲ್ಲೆಯ ಒಟ್ಟು 16,624 ವಿದ್ಯಾರ್ಥಿಗಳಲ್ಲಿ 16,024 ಮಕ್ಕಳು ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ ಮರು ಪರೀಕ್ಷೆ ಬರೆದವರು ಸೇರಿದಂತೆ ಒಟ್ಟಾರೆಯಾಗಿ ಈ ಬಾರಿ 17,133 ಮಂದಿ ಹೆಸರು ನೋಂದಾಯಿಸಿದ್ದರು. ಅವರಲ್ಲಿ 16,275 ಮಂದಿ ತೇರ್ಗಡೆಗೊಂಡು ಶೇ.94.99 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ ಪರೀಕ್ಷೆ ಬರೆದವರು ಶೇ.52.43 ಹಾಗೂ ಮರು ಪರೀಕ್ಷೆ ಬರೆದವರು ಶೇ.41.01 ತೇರ್ಗಡೆಗೊಂಡಿದ್ದಾರೆ.

ಬಾಲಕಿಯರ ಮೇಲುಗೈ

ಜಿಲ್ಲೆಯಲ್ಲಿ 8,452 ಬಾಲಕರಲ್ಲಿ 7,872 (ಶೇ.93.14) ಹಾಗೂ 8,681 ಬಾಲಕಿಯರಲ್ಲಿ 8,403 (ಶೇ.96.8) ಮಂದಿ ತೇರ್ಗಡೆಗೊಂಡಿದ್ದಾರೆ. ಈ ವರ್ಷವೂ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.

ನಗರ ವಿದ್ಯಾರ್ಥಿಗಳ ಸಾಧನೆ

ಪ್ರಸ್ತುತ ಪರೀಕ್ಷೆಯಲ್ಲಿ ನಗರ ಪ್ರದೇಶಗಳ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ 6,090 ಮಕ್ಕಳ ಪೈಕಿ 5,877 ಮಂದಿ (ಶೇ.96.5) ಉತ್ತೀರ್ಣರಾಗಿದ್ದಾರೆ. 10,534 ಮಂದಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ 10,147 ಮಂದಿ (ಶೇ.96.33) ಉತ್ತೀರ್ಣರಾಗಿದ್ದಾರೆ.
ಈ ಬಾರಿಯೂ ಉಡುಪಿ ಜಿಲ್ಲೆ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಲು ಶ್ರಮ ವಹಿಸಿದ ಎಲ್ಲ ಸಾಧಕ ವಿದ್ಯಾರ್ಥಿಗಳಿಗೆ, ಶಿಕ್ಷಕರು, ಪಾಲಕರು ಹಾಗೂ ಸಹಕರಿಸಿದ ಜಿಲ್ಲಾಡಳಿತ ಮತ್ತು ಎಲ್ಲ ಇಲಾಖೆಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಡಿಡಿಪಿಯು ಮಾರುತಿ ತಿಳಿಸಿದ್ದಾರೆ.
"

ಫಲಿತಾಂಶದಿಂದ ತುಂಬ ಸಂತಸವಾಗಿದೆ. ಪಿಯಸಿಯಲ್ಲಿ ಹೆಚ್ಚಿನ ಅಂಕ ಗಳಿಸಲೇಬೇಕೆಂದು ಚೆನ್ನಾಗಿ ಓದಿಕೊಳ್ಳುತ್ತಿದ್ದೆ. ಅಪ್ಪ-ಅಮ್ಮನ ಪ್ರೋತ್ಸಾಹ, ಕಾಲೇಜಿನಲ್ಲಿ ಅಧ್ಯಯನದ ವೇಳೆ ನನಗೆ ಏನೇ ಸಂದೇಹ ಉಂಟಾದರೂ ಎಲ್ಲ ವಿಷಯ ಶಿಕ್ಷಕರೂ ಅದನ್ನು ನಿವಾರಿಸಿಕೊಡುತ್ತಿದ್ದರು. ಒಟ್ಟು 597 ಮಾರ್ಕ್ಸ್​ ಲಭಿಸಿದೆ. ಎಲ್ಲ ವಿಷಯಗಳಿಗೂ ಶೇ.100 ಅಂಕ ಲಭಿಸಿದ್ದು, ಇಂಗ್ಲಿಷ್​ನಲ್ಲಿ 3 ಅಂಕ ಕಡಿಮೆ ಬಂದಿದೆ. ಮುಂದೆ ಸಿಎ ಮಾಡುವ ಆಸೆಯಿದೆ.

ಪರೀಕ್ಷೆಯಲ್ಲಿ ಸಾಧನೆ ಮಾಡಿದ ಟಾಪರ್​ಗಳು 

ಕುಂದಾಪುರ ತಾಲೂಕಿನ ಜನತಾ ಪಿಯು ಕಾಲೇಜ್​ನ ರಶ್ಮಿ ರಾಜೇಶ್​ ಪೈ 598 ಅಂಕ, ಜನತಾ ಪಿಯು ಕಾಲೇಜ್​ನ ಶ್ಯಾಮ ಸುಂದರ್​ ಶೆಟ್ಟಿ 597, ಜನತಾ ಪಿಯು ಕಾಲೇಜಿನ ಪ್ರಾರ್ಥನಾ ಹರೀಶ್​ ಶೆಟ್ಟಿ 597, ಕ್ರಿಯೇಟಿವ್​ ಪಿಯು ಕಾಲೇಜ್​ನ ಪ್ರೇರಣಾ ರಾಮಚಂದ್ರ ಹೆಗಡೆ 598, ಎಕ್ಸಲೆಂಟ್​ ಪಿಯು ಕಾಲೇಜ್​-ನ ಮಾನ್ಯಾ ಜಯಕರ್​ ಶೆಟ್ಟಿ 597, ಕಾರ್ಕಳ ತಾಲೂಕಿನ ಅಮೃತ ಭಾರತಿ ಕಾಲೇಜಿನ ಸಮೀಕ್ಷಾ ರಾಮಚಂದ್ರ ನಾಯಕ್​ 597, ಕಾರ್ಕಳ ಜ್ಞಾನಸುಧಾ ಕಾಲೇಜಿನ ಚೈತ್ರಿಕಾ ಲೋಕೇಶ್​ ಚೌಧರಿ 597, ಕಾರ್ಕಳ ಜ್ಞಾನಸುಧಾ ಕಾಲೇಜಿನ ವೈಷ್ಣವಿ ಡಿ. ಕುಲಕರ್ಣಿ 597, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಾಣಿಜ್ಯ ವಿಭಾಗದ ಕಾರ್ತಿಕ್​ ಜಿ. ಕಾಮತ್​ 596, ಅನಿಶ್​ ಜಿ. ಉಡುಪ 596, ಪ್ರಜ್ಞಾ ಆರ್​. ಭಟ್​ 596, ಲಿಯೋನಾ ವಿ. ಆರಾನ್ಹಾ 597, ವಿಜ್ಞಾನ ವಿಭಾಗದ ಅಶ್ಮಿತ್​ ಜೆ. ಕುಂದರ್​ 594, ಸಂಕೇತಾ ಎಚ್​.ಎಸ್​. 592, ಅರವಿಂದ ಬಾಯರಿ 590, ಅದಮಾರು ಪೂರ್ಣಪ್ರಜ್ಞ ಕಾಲೇಜು ಕಾಪುವಿನ ಅಂಕಿತಾ ಎಸ್​ ಭಟ್​ 597, ಉಡುಪಿ ಜ್ಞಾನಸುಧಾ ಪಿಯ ಕಾಲೇಜಿನ ಆರ್ನವಿ ಪುರುಷೋತ್ತಮ ಆಚಾರ್ಯ 597, ಉಡುಪಿ ಎಂಜಿಎಂ ಕಾಲೇಜಿನ ನೂತನಾ ನಾರಾಯಣ ನಾಯಕ್​ 597, ಹೆಬ್ರಿಯ ಪಿಆರ್​ಎನ್​ ಅಮೃತ ಭಾರತಿ ಕಾಲೇಜಿನ ಸಮೀಕ್ಷಾ ಆರ್​. 597 ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
"

ನಿರೀಕ್ಷೆಯಂತೆ ಹೆಚ್ಚು ಅಂಕ ಬಂದಿದೆ. ಮೊದಲ ಪಿಯುಸಿಗೆ ಹೋಲಿಸಿದರೆ ದ್ವಿತೀಯ ಪಿಯುಸಿ ಕಳೆದದ್ದೇ ತಿಳಿಯಲಿಲ್ಲ. ತಿಂಗಳ ಕಾಲ ಅಧ್ಯಯನಕ್ಕೆ ರಜಾ ಲಭಿಸಿತ್ತು. ವಿಷವಾರು ಯಾವುದೇ ಡೌಟ್​ ಇದ್ದರೂ ಸಹ ಶಿಕ್ಷಕರಿಂದ ವಾಟ್ಸಾಪ್​ ಮೂಲಕವೇ ಕ್ಲಿಯರ್​ ಮಾಡಿಕೊಳ್ಳುತ್ತಿದ್ದೆ. ನಿತ್ಯ 5-6 ಗಂಟೆ ಓದಿಗೆ ಮೀಸಲಿಟ್ಟಿದ್ದೆ. ಸಂಗೀತವನ್ನೂ ಕಲಿಯುತ್ತಿದ್ದು, ಮೈಂಡ್​ ಫ್ರೆಶ್​ ಆಗಲು ಮನೆಯಲ್ಲಿ ಭಜನೆ ಮಾಡುತ್ತಿದ್ದೆ. ಮುಂದೆ ಬಿಕಾಂ ಕಲಿತು, ಎಂಬಿಎ ಮಾಡಿ ಉದ್ಯೋಗ ಮಾಡುವ ಕನಸು ಕಂಡಿದ್ದೇನೆ.

ಉಡುಪಿಯ 10 ವರ್ಷದ ಫಲಿತಾಂಶ

ವರ್ಷ                    ಶೇಕಡ                   ಸ್ಥಾನ
2015                  92.32                     2
2016                  90.35                     2
2017                  90.01                     1
2018                  90.67                     2
2019                  92.20                     1
2020                  90.71                     1
2021                 100  (ಕರೊನಾ ಸಂದರ್ಭ)
2022                 86.38                      2
2023                 95.24                      2
2024                 96.80                      2
2025                 93.90                      1