ಕಾರ್ಕಳ ಶಾಸಕ ಸುನೀಲಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಎಸ್ಪಿ ಹರಿರಾಂ ಶಂಕರ್ ಅವರಿಗೆ ಮನವಿ ನೀಡಿದರು. ಗೀತಾ ವಾಗ್ಳೆ, ಭಾನು ಭಾಸ್ಕರ್, ಪ್ರತಿಮಾ ರಾಣಿ, ರೆಹಮತ್ ಶೇಖ್, ಚರಿತ್ರಾ ಎಂ. ಇತರರಿದ್ದರು.
* ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಆಗ್ರಹ
* ಇಂದಿರಾ ಗಾಂಧಿ ವಿರುದ್ಧ ಫೇಸ್ಬುಕ್ನಲ್ಲಿ ಸುಳ್ಳು ಸುದ್ದಿ ಹಂಚಿಕೆ
ಉಡುಪಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಸುಳ್ಳು ಸುದ್ದಿ ಹಂಚಿಕೊಂಡಿರುವ ಕಾರ್ಕಳ ಶಾಸಕ ವಿ.ಸುನೀಲಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಆಗ್ರಹಿಸಿದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಯೋಗದೊಂದಿಗೆ ಗುರುವಾರ (ಮೇ 14) ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಅಕ್ಷಮ್ಯ ಅಪರಾಧ
ಸುನೀಲಕುಮಾರ್ ಅವರು ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದವರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರೂ ಆಗಿದ್ದಾರೆ. ಆದರೆ, ದೇಶದ ಮಾಜಿ ಪ್ರಧಾನಿ ಇಂದಿರಾ ಅವರ ಕುರಿತು ಸುಳ್ಳು ಸುದ್ದಿ ಪಸರಿಸುವುದು ಸೂಕ್ತವಲ್ಲ. ಯಾವುದೇ ರೀತಿಯಲ್ಲಿ ಅದನ್ನು ಪರಿಶೀಲಿಸದೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವುದು ಅಕ್ಷಮ್ಯ ಅಪರಾಧ. ದೇಶಕ್ಕೆ ಇಂದಿರಾ ಗಾಂಧಿ ಅವರ ಕೊಡುಗೆ ಅಪಾರ. ಅಂತಹ ಮೇರುನಾಯಕಿಗೆ ಅಪಮಾನ ಮಾಡಿರುವುದು ಸುನೀಲಕುಮಾರ್ ಅವರಂತಹ ಹಿರಿಯ ಶಾಸಕರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಅವರು ಬಿಜೆಪಿ ಐಟಿ ಸೆಲ್ನ ಸುಳ್ಳು ಮಾಹಿತಿ ಪರಿಶೀಲಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಿ ಎಂದು ಸಲಹೆ ನೀಡಿದರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆ, ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಭಾನು ಭಾಸ್ಕರ್, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷೆಯರಾದ ಪ್ರತಿಮಾ ರಾಣಿ ಹಾಗೂ ರೆಹಮತ್ ಶೇಖ್, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯೆ ಚರಿತ್ರಾ ಎಂ., ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಾ ಅಂಚನ್, ಸಂಧ್ಯಾ ತಿಲಕ್ರಾಜ್ ಉಪಸ್ಥಿತರಿದ್ದರು.