ಉಡುಪಿ ತಾಪಂ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆ ನಡೆಯಿತು.
ಉಡುಪಿ: ಜಿಲ್ಲೆಯಲ್ಲಿ 5 ಜಿಲ್ಲೆಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಳೆಗಾಲದಲ್ಲಿ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಿಥಿಲಗೊಂಡ ಶಾಲೆಗಳ ಪಟ್ಟಿ ತಯಾರಿಸಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿ ತಾಪಂ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಯಲ್ಲಮ್ಮ, ತಾಲೂಕು 68 ಸರ್ಕಾರಿ ಶಾಲೆಗಳಿದ್ದು, 234 ಕೊಠಡಿಗಳಿವೆ. ಇದರಲ್ಲಿ 42 ಕೊಠಡಿಗಳಲ್ಲಿ ಹೆಚ್ಚಿನ ದುರಸ್ತಿ ಕಾರ್ಯ ಅಗತ್ಯವಿದೆ. 60 ಕೊಠಡಿಗಳಲ್ಲಿ ಸಣ್ಣಪುಟ್ಟ ರಿಪೇರಿ ಸಾಕಾಗುತ್ತಿದೆ. ಈ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ನೀಡುವಂತೆ ಇಂಜಿನಿಯರಿಂಗ್ ವಿಭಾಗಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದರು.
ಶಾಸಕ ಯಶ್ಪಾಲ್ ಮಾತನಾಡಿ, ದೇವಸ್ಥಾನಗಳ ಆದಾಯಕ್ಕೆ ಅನುಗುಣವಾಗಿ ಗ್ರೇಡ್ ನೀಡಲು ದತ್ತಿ ಇಲಾಖೆ ಹೊಸದಾಗಿ ಆದೇಶ ಮಾಡಿದೆ. ಈ ಬಗ್ಗೆ ಆದಷ್ಟು ಶ್ರೀ ಕ್ರಮಕೈಗೊಳ್ಳಬೇಕು. ಗ್ರೇಡ್ ವಿಳಂಬದಿಂದ ಪೂಜೆ, ಪ್ರಸಾದ ವಿತರಕರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಪೂಜಾ ಸಾಮಗ್ರಿ ಪೂರೈಕೆ ಮಾಡಿದವರ ಬಿಲ್ ಬಾಕಿ ಉಳಿದಿದೆ. ಇದರಿಂದ ದೇವಸ್ಥಾನಗಳಲ್ಲಿ ಅವ್ಯವಸ್ಥೆ ಉಂಟಾಗುವ ಸಾಧ್ಯತೆಗಳಿವೆ ಎಂದರು.
ಗ್ರಾಪಂ ಸೂಪರ್ಪವರ್ ವರ್ತನೆ ಸಲ್ಲದು
ನಗರಾಭಿವೃದ್ಧಿ ಪ್ರಾಧಿಕಾರದಿಂದ 9/11 ಪಡೆಯದೆ ಇದ್ದರೂ ಕೆಮ್ಮಣ್ಣು ಗ್ರಾಪಂ ಪಿಡಿಒ ರ್ನಿಣಯ ತೆಗೆದುಕೊಂಡು ಸ್ಥಳಿಯ ಮದ್ರಸಕ್ಕೆ ಅನುಮತಿ ನೀಡಿದ್ದಾರೆ. ಒಂದೇ ಸಮುದಾಯದೊಳಗೆ ವಿವಾದ ಏರ್ಪಡಿದ್ದು, ಗ್ರಾಪಂ ಸೂಪರ್ಪವರ್ ವರ್ತನೆ ಸಲ್ಲದು. ಈ ಬಗ್ಗೆ ನೋಟೀಸ್ ಜಾರಿ ಮಾಡುವಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿದರು.
ವೃದ್ಧಾಪ್ಯ ವೇತನ ನೀಡಲು ರ್ನಿಣಯ
ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಳೆದ 3 ತಿಂಗಳಿನಿಂದ ನೂರಾರು ಮಂದಿಗೆ ವೃದ್ಧಾಪ್ಯವೇತನ ಬಿಡುಗಡೆಯಾಗಿಲ್ಲ. ಸರ್ವೆಯರ್ ಮುಷ್ಕರದಿಂದ ಬಡವರು ಮನೆಕಟ್ಟಲು 9/11 ಪಡೆಯಲು ಪರದಾಡುವಂತಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗುರುರಾಜ್, ಸರ್ಕಾರ 32 ಸಾವಿರ ರೂ. ಹೆಚ್ಚಿನ ಆದಾಯ ಹೊಂದಿರುವವರಿಗೆ ವೃದ್ಧಾಪ್ಯ ವೇತನ ಸ್ಥಗಿತಗೊಳಿಸಲು ಸೂಚಿಸಿದೆ. ತಾಲೂಕಿನಲ್ಲಿ 8656 ಮಂದಿಯ ಪಟ್ಟಿ ಒದಗಿಸಿದ್ದು, 7564 ಮಂದಿ ಸ್ಥಿತಿಗತಿ ಪರಿಶೀಲಿಸಲಾಗಿದೆ. 1800 ಅರ್ಜಿಗಳು ಬಾಕಿ ಉಳಿದಿವೆ ಎಂದರು. ಈ ಬಗ್ಗೆ ಚರ್ಚೆ ನಡೆದು ಈ ಹಿಂದಿನ ನಿಯಮ ಪ್ರಕಾರ ಅರ್ಹ ಲಾನುಭವಿಗಳನ್ನು ಗುರುತಿಸಿ ಪಿಂಚಣಿ ನೀಡಲು ಅವಿರೋಧವಾಗಿ ರ್ನಿಣಯಕೈಗೊಳ್ಳಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆ ಈ ವರ್ಷ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಕೆ ವಿಳಂಬ ಮಾಡಿದ್ದರಿಂದ ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಹೀಗಾಗಿ ಡಿಸೆಂಬರ್ ತಿಂಗಳೊಳಗೆ ಎಲ್ಲಾ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಬೇಕು. ಮಳೆಗಾಲದಲ್ಲೂ ಶೇ. 70ರಷ್ಟು ಭಾಗಕ್ಕೆ ಹಲಗೆ ಹಾಕಬಹುದು. ನೀರು ಮೇಲಿಂದ ಹರಿದು ಹೋಗಲಿ ಎಂದರು.
ಎಲ್ಲೂರು ಗೋಶಾಲೆ ಕಾಮಗಾರಿ ಪೂರ್ಣಗೊಂಡು 6 ತಿಂಗಳು ಸಂದಿದೆ. ಆದಷ್ಟು ಬೇಗ ಕಾರ್ಯಾರಂಭ ಮಾಡಲು ಕ್ರಮವಹಿಸಬೇಕು. ಬೀಡಾಡಿ ದನಗಳನ್ನು ಹೂಳಲು ಗೋ ರುದ್ರಭೂಮಿ ಪ್ರಾರಂಭಿಸಲಾಗಿದೆ. ಇದೇ ರೀತಿ ನಗರ ಪ್ರದೇಶದಲ್ಲಿ ಪ್ರಾಣಿಗಳ ಕಳೆಬರ ಸುಡಲು ವಿದ್ಯುತ್ ಚಿತಾಗಾರಗಳನ್ನು ಅಳವಡಿಸುವುದು ಅತೀ ಅಗತ್ಯವಾಗಿದೆ ಎಂದು ಹೇಳಿದರು.
ತಾಪಂ ಆಡಳಿತಾಧಿಕಾರಿ ಡಾ.ಉದಯ್ ಶೆಟ್ಟಿ, ಇಒ ವಿಜಯಾ, ನಗರಸಭೆ ಪೌರಾಯುಕ್ತ ಮಹಂತೇಶ್ ಹಿಂಗರಗಿ ಉಪಸ್ಥಿತರಿದ್ದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಉಡುಪಿ ತಾಪಂ ತೆಮಾಸಿಕ ಪ್ರಗತಿಪರಿಶೀಲನಾ ಸಭೆ ನಡೆಯಿತು.