ಉಡುಪಿಯ ಪತ್ರಿಕಾ ಭವನದಲ್ಲಿ 'ವಿಕಸಿತ್​ ಭಾರತ್​ ಯಂಗ್​ ಲೀಡರ್ಸ್​ ಡೈಲಾಗ್​ (ವಿಬಿವೈಎಲ್​ಡಿ)- 2027' ಅಭಿಯಾನದ ಪೋಸ್ಟರ್​ಅನ್ನು ಉಲ್ಲಾಸ್​ ಕೆಟಿಕೆ ಬಿಡುಗಡೆ ಮಾಡಿದರು. ಶ್ಯಾಮಲಾ ಕಿರಣ್​ ಇದ್ದರು. 
ಉಡುಪಿ

ಪ್ರಧಾನಿ ಮೋದಿಯೊಂದಿಗೆ ಸಂವಾದಕ್ಕೆ ಅವಕಾಶ

* ಜಿಲ್ಲಾ ಉಪನಿರ್ದೇಶಕ ಉಲ್ಲಾಸ್​ ಕೆಟಿಕೆ ಮಾಹಿತಿ

* 'ಮೈ ಭಾರತ್​' ಪೋರ್ಟಲ್​ನಲ್ಲಿ ರಸಪ್ರಶ್ನೆ ಅಭಿಯಾನ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ ಭಾರತದ ಸಮಗ್ರ ಭವಿಷ್ಯ ರೂಪಿಸಲು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ 'ವಿಕಸಿತ್​ ಭಾರತ್​ ಯಂಗ್​ ಲೀಡರ್ಸ್​ ಡೈಲಾಗ್​ (ವಿಬಿವೈಎಲ್​ಡಿ)-2027' ಎಂಬ ಯುವ ಉತ್ಸವ ಆರಂಭಿಸಲಾಗಿದೆ. 'ಮೈ ಭಾರತ್​' ಪೋರ್ಟಲ್​ನಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಅಭಿಯಾನ ಪ್ರಾರಂಭಗೊಂಡಿದ್ದು, ಉಡುಪಿ ಜಿಲ್ಲೆಯ ಯುವಜನತೆಗೆ ಪಾಲ್ಗೊಳ್ಳಲು ಮುಕ್ತ ಸದವಕಾಶ ನೀಡಲಾಗಿದೆ ಎಂದು 'ಮೈ ಭಾರತ್​' ಉಡುಪಿ ಕೇಂದ್ರದ ಉಪನಿರ್ದೇಶಕ ಉಲ್ಲಾಸ್​ ಕೆಟಿಕೆ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಗುರುವಾರ (ಸೆ.10) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜೇತರಾದ ಮಕ್ಕಳಿಗೆ 2027ರ ಜ.12ರಂದು ನಡೆಯಲಿರುವ ಪ್ರಧಾನಿ ಮೋದಿ ಅವರೊಂದಿಗಿನ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಲಿದೆ. ನೋಂದಣಿಗೆ ಸೆ.30 ಕೊನೆಯ ದಿನ. ಆಸಕ್ತರು mybharat.gov.in ಪೋರ್ಟಲ್​ನಲ್ಲಿ ನೋಂದಣಿ ಮಾಡಿ, VBYLD 2027 Quiz ವಿಭಾಗ ಪರಿಶೀಲಿಸಬೇಕು. ನೋಂದಣಿ ಸಂಪೂರ್ಣ ಉಚಿತ ಎಂದು ತಿಳಿಸಿದರು.

6 ಕ್ಷೇತ್ರಗಳ ಮೂಲಕ ಸಬಲೀಕರಣ

ತಳಮಟ್ಟದಿಂದ ರಾಷ್ಟ್ರೀಯ ಮಟ್ಟದ ವರೆಗೆ 6 ಪ್ರಮುಖ ಕ್ಷೇತ್ರಗಳ ವೇದಿಕೆ ಒದಗಿಸಲಾಗಿದೆ. ವಿಕಸಿತ್​ ಭಾರತ್​ ಚಾಲೆಂಜ್​ ಟ್ರ್ಯಾಕ್​, ಸಾಂಸ್ಕೃತಿಕ ಟ್ರ್ಯಾಕ್​, ಭಾರತಕ್ಕಾಗಿ ನಾವೀನ್ಯತೆ ಟ್ರ್ಯಾಕ್​, ಭಾರತಕ್ಕಾಗಿ ವಿಕಾಸ ಟ್ರ್ಯಾಕ್​ ಮತ್ತು ಸಾಮಾಜಿಕ ಕಾಳಜಿಗಾಗಿ ಹ್ಯಾಕ್​ ಟ್ರ್ಯಾಕ್​, ಯುವ ಉದ್ಯಮಿಗಳ ಸವಾಲು ಹಾಗೂ ಯುವ ಸಂಸತ್ತು ಎಂಬ ವೇದಿಕೆ ಒದಗಿಸಲಾಗಿದೆ. ಜಿಲ್ಲೆಯ 15ರಿಂದ 29 ವರ್ಷದೊಳಗಿನ ಎಲ್ಲ ಯುವಜನರು ಪಾಲ್ಗೊಳ್ಳಬಹುದು. ಈಗಾಗಲೇ 30 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿದ್ದಾರೆ ಎಂದು ತಿಳಿಸಿದರು. 

3 ಹಂತದ ಮೌಲ್ಯಮಾಪನ

ವಿಕಸಿತ್​ ಭಾರತ್​ ಚಾಲೆಂಜ್​ ಟ್ರ್ಯಾಕ್​ ಪ್ರಮುಖವಾದುದಾಗಿದೆ. ಭವಿಷ್ಯದ ಆಡಳಿತ, ಹವಾಮಾನ ಬದಲಾವಣೆ, ಜನಸಂಖ್ಯಾ ಲಾಭಾಂಶ, ನಾವೀನ್ಯತೆ ಮತ್ತು ಭವಿಷ್ಯದ ಸಿದ್ಧತೆಯಂತಹ ಕಲ್ಪನೆ ವ್ಯಕ್ತಪಡಿಸಲು ಅವಕಾಶವಿದೆ. 3 ಹಂತದ ಅರ್ಹತಾ ಮೌಲ್ಯಮಾಪನ ಪ್ರಕ್ರಿಯೆಲ್ಲಿ ಸ್ಪರ್ಧಿಗಳು ಮುಂದೆ ಸಾಗುತ್ತಾರೆ. ಪೋರ್ಟಲ್​ನಲ್ಲಿ ಬಹುಭಾಷೆಗಳಲ್ಲಿ ನಡೆಸುವ ರಾಷ್ಟ್ರಮಟ್ಟದ ಆನ್​ಲೈನ್​ ರಸಪ್ರಶ್ನೆಯಲ್ಲಿ ಭಾಗಿಯಾಗುವುದು, ಇದರಲ್ಲಿ ಹೆಚ್ಚು ಅಂಕ ಗಳಿಸಿದವರು ಆಯ್ಕೆ ಮಾಡಿದ ವಿಷಯದ ಕುರಿತು 500 ಪದಮಿತಿಯ ಪ್ರಬಂಧ ಸಲ್ಲಿಸುವುದು ಹಾಗೂ ಜಿಲ್ಲೆಯಿಂದ ಆಯ್ಕೆಯಾಗುವ 50 ಪ್ರಬಂಧದ ಯುವಲೇಖಕರು ಜಿಲ್ಲಾ ಮಟ್ಟದಲ್ಲಿ ವಿಚಾರ ಮಂಡಿಸಲಿದ್ದಾರೆ. ಇಲ್ಲಿ ಆಯ್ಕೆಯಾದ ಇಬ್ಬರಿಗೆ ರಾಜ್ಯಮಟ್ಟಕ್ಕೆ ಪ್ರವೇಶ ಪಡೆಯಲಿದ್ದು, ಪ್ರಾದೇಶಿಕ ವಿಜೇತರಿಗೆ ದಿಲ್ಲಿಯಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಚಾರ ಮಂಡಿಸುವ ಅವಕಾಶ ಲಭಿಸಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಸಿಬ್ಬಂದಿ ಶ್ಯಾಮಲಾ ಕಿರಣ್​ ಇದ್ದರು.