ಉಡುಪಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾಸ್ಪತ್ರೆಯ ಕಾಮಗಾರಿಯನ್ನು ಯಶ್ಪಾಲ್ ಸುವರ್ಣ ಪರಿಶೀಲಿಸಿದರು. ಡಾ. ಎಚ್.ಅಶೋಕ್, ಗುರುಪ್ರಸಾದ್, ಪ್ರಭಾಕರ ಪೂಜಾರಿ, ಸುಮಿತ್ರಾ ನಾಯಕ್, ಬಾಲಕೃಷ್ಣ ಶೆಟ್ಟಿ, ದಿನೇಶ್ ಅಮೀನ್, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ ಇತರರಿದ್ದರು.
ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ, ಪರಿಶೀಲನೆ
ಉಡುಪಿ: ಉಡುಪಿಯಲ್ಲಿ ನೂತನ ಜಿಲ್ಲಾಸ್ಪತ್ರೆಯ ಕಾಮಗಾರಿಗೆ ಅಗತ್ಯವಿರುವ ಬಾಕಿ ಅನುದಾನ ತಕ್ಷಣ ಬಿಡುಗಡೆ ಮಾಡಿ, ಜ.15ರೊಳಗೆ ಜಿಲ್ಲೆಯ ಜನತೆಯ ಆರೋಗ್ಯ ಸೇವೆ ಲಭಿಸುವಂತೆ ಮಾಡಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಉಡುಪಿಯ ಅಜ್ಜರಕಾಡಿನಲ್ಲಿ ಕಳೆದ 4 ವರ್ಷದಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾಸ್ಪತ್ರೆಯ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶನಿವಾರ (ನ.22) ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಬಾಕಿ ಇರುವ ಕಾಮಗಾರಿಗಳ ಬಗ್ಗೆಯೂ ಮಾಹಿತಿ ಪಡೆದರು.
30 ಕೋಟಿ ರೂ. ನೀಡಿ
ನೂತನ 250 ಹಾಸಿಗೆಗಳ ಜಿಲ್ಲಾಸ್ಪತ್ರೆಯ ಶೇ.80 ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಸರ್ಕಾರದಿಂದ 25 ಕೋಟಿ ರೂ. ಹಾಗೂ ಉಳಿಕೆ ಕಾಮಗಾರಿಗಳಿಗೆ 5 ಕೋಟಿ ರೂ. ಅಗತ್ಯವಿದೆ. ಒಟ್ಟು 30 ಕೋಟಿ ರೂ. ಅನುದಾನ ತಕ್ಷಣ ಮಂಜೂರು ಮಾಡಬೇಕು. ಏಳು ಮಹಡಿ ಒಳಗೊಂಡಿರುವ 3 ಲಕ್ಷ ಚದರ್ ಅಡಿಯ ಈ ಆಸ್ಪತ್ರೆಗೆ ಅಗತ್ಯವಿರುವ ಬೆಡ್, ವೈದ್ಯಕೀಯ ಸಲಕರಣೆ ಹಾಗೂ ಇನ್ನಿತರ ಉಪಕರಣಗಳ ಖರೀದಿಗೂ ಸಹ ಅನುದಾನದ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಎಚ್.ಅಶೋಕ್, ಆರೋಗ್ಯ ಇಲಾಖೆಯ ಇಂಜಿನಿಯರ್ ಗುರುಪ್ರಸಾದ್, ಜಿಲ್ಲಾಸ್ಪತ್ರೆಯ ವಿವಿಧ ವಿಭಾಗದ ವೈದ್ಯರು, ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸುಮಿತ್ರಾ ನಾಯಕ್, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ, ನೀತಾ ಪ್ರಭು, ಶ್ರೀವತ್ಸ, ಮಾಯಾ ಕಾಮತ್, ದೀಪಾ, ಶಿವಪ್ರಸಾದ್ ಇತರರು ಉಪಸ್ಥಿತರಿದ್ದರು.
ಮೆಸ್ಕಾಂಗೆ 3.5 ಕೋಟಿ ರೂ. ಬಿಲ್ ಬಾಕಿ
ಖಾಸಗಿ ಹಾಗೂ ನೆರೆಯ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯ ಮೇಲಿನ ಅವಲಂಬನೆ ತಪ್ಪಿಸಲು ಇಲ್ಲಿಯೇ ಕಿಡ್ನಿ, ಹೃದಯ, ನ್ಯೂರೋ ಸಂಬಂಧಿತ ಚಿಕಿತ್ಸೆ ಒಳಗೊಂಡ ಸೂಪರ್ ಸ್ಪೆಷಾಲಿಟಿ ವ್ಯವಸ್ಥೆಯ ಅಗತ್ಯತೆಯಿದೆ. ಈ ಹಿಂದೆ ಯೋಜಿಸಿದಂತೆ ಸಂಪೂರ್ಣ ಸೌಲಭ್ಯ ಒಳಗೊಂಡ 50 ಬೆಡ್ನ ಕ್ರಿಟಿಕಲ್ ಕೇರ್ ಯೂನಿಟ್ ಪ್ರಾರಂಭಿಸಬೇಕು. 250 ಬೆಡ್ನ ಆಸ್ಪತ್ರೆಗೆ ತಕ್ಕಂತೆ ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ವೈದ್ಯರು, ವೈದ್ಯಕೇತರ ಸಿಬ್ಬಂದಿ ಮಂಜೂರಾತಿಗೆ ಕ್ರಮ ವಹಿಸಬೇಕು. ಆಸ್ಪತ್ರೆಯ ನಿರ್ವಹಣಾ ವೆಚ್ಚ ಹಾಗೂ ಕೂಸಮ್ಮ ಶಂಭು ಶೆಟ್ಟಿ ತಾಯಿ ಮಕ್ಕಳ ಆಸ್ಪತ್ರೆಯ ವಿವಿಧ ನಿರ್ವಹಣಾ ಸಮಸ್ಯೆಗಳಿಗೂ ಪರಿಹಾರ ಕ್ರಮ ಕೈಗೊಳ್ಳಬೇಕು. ಮೆಸ್ಕಾಂನ ಬಾಕಿ ಉಳಿದಿರುವ 3.5 ಕೋಟಿ ರೂ. ಬಿಲ್ ಪಾವತಿಗೂ ಸರ್ಕಾರ ಮುಂದಾಗಬೇಕು ಎಂದು ಯಶ್ಪಾಲ್ ಆಗ್ರಹಿಸಿದರು.
ಜಿಲ್ಲಾಸ್ಪತ್ರೆ ಪೂರ್ಣಗೊಳಿಸುವಂತೆ ಈಗಾಗಲೇ ಹಲವು ಬಾರಿ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೂ ಮನವಿ ಮಾಡಿದ್ದೇನೆ. ಆದರೆ, ಸಚಿವರು ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಜಿಲ್ಲೆಯ ಜನತೆಯ ಆರೋಗ್ಯ ಸೇವೆಯ ಹಿತದೃಷ್ಟಿಯಿಂದ ಜ.15 ರೊಳಗೆ ನೂತನ ಜಿಲ್ಲಾಸ್ಪತ್ರೆ ಸೇವೆಗೆ ಲಭ್ಯವಾಗಬೇಕು. ಇಲ್ಲದಿದ್ದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ.