* ದೆಹಲಿಯಲ್ಲಿ ಬಾಂಬ್ ಸ್ಫೋಟ ಖಂಡಿಸಿ ನಡೆದಿದ್ದ ಪ್ರತಿಭಟನೆ
* ಮಂಗಳೂರು ರೈಲ್ವೆ ಸ್ಟೇಷನ್ನಲ್ಲಿ ವಶ
ಉಡುಪಿ: ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ, ಕಾರ್ಕಳ ತಾಲೂಕಿನ ಅಜೇಕಾರು ಮರ್ಣೆಯ ರತ್ನಾಕರ್ ಅಮೀನ್ (49) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಜಟ್ಕಾ ನಿಲ್ದಾಣದ ಬಳಿ ನ.15ರಂದು ಬೆಳಗ್ಗೆ 10 ಗಂಟೆಗೆ ಹಿಂದು ಜಾಗರಣಾ ವೇದಿಕೆಯ ಉಡುಪಿ ತಾಲೂಕು ಘಟಕವು ನವದೆಹಲಿಯಲ್ಲಿ ಬಾಂಬ್ ಸ್ಪೋಟ ಹಾಗೂ ಇಸ್ಲಾಮಿಕ್ ಭಯೋತ್ಪಾದನಾ ಕೃತ್ಯ ಖಂಡಿಸಿ ಪ್ರತಿಭಟನಾ ಸಭೆ ಆಯೋಜಿಸಿತ್ತು. ಇಲ್ಲಿ ರತ್ನಾಕರ್ ಮಾಡಿರುವ ಭಾಷಣವು ಭಿನ್ನ ಮತಗಳ ನಡುವೆ ವೈರತ್ವ, ದ್ವೇಷ ಅಥವಾ ವೈಮನಸ್ಸು ಉಂಟು ಮಾಡುವಂತೆ ಪ್ರಚೋದಿಸಿ ಹಾಗೂ ಅನ್ಯ ಧರ್ಮಗಳ ಮಧ್ಯದಲ್ಲಿ ಸೌಹಾರ್ದತೆಗೆ ಧಕ್ಕೆ ಹಾಗೂ ದ್ವೇಷ ಉಂಟು ಮಾಡುವ ರೀತಿಯಲ್ಲಿದೆ ಎಂದು ಆರೋಪಿಸಿ ಪೊಲೀಸರು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಮಂಗಳೂರಿನಲ್ಲಿ ವಶಕ್ಕೆ
ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ. ಬಡಿಗೇರ ನೇತೃತ್ವದ ವಿಶೇಷ ತಂಡವು ಖಚಿತ ಮಾಹಿತಿಯ ಮೇರೆಗೆ ನ.18ರಂದು ಬೆಳಗ್ಗೆ ದಾಳಿ ನಡೆಸಿ, ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ನಲ್ಲಿದ್ದ ರತ್ನಾಕರ್ ಅಮೀನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.