ಉಡುಪಿ ಜಿಲ್ಲೆಯಲ್ಲಿ ಬೆಳೆಯುವ ಶಂಕರಪುರ ಮಲ್ಲಿಗೆ. (ಸಾಂದರ್ಭಿಕ ಚಿತ್ರ). 
ಉಡುಪಿ

ಮಲ್ಲಿಗೆ ಕೃಷಿಕರಿಗೆ ಹೆಚ್ಚಿಸಿ ಸಾಲದ ಮೊತ್ತ

* ಜಿಲ್ಲಾಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಒತ್ತಾಯ

* ಕಡಿತ ಮಾಡದಂತೆ ಡಿಸಿಸಿ ಬ್ಯಾಂಕ್​ಗೆ ಆಗ್ರಹ

ಉಡುಪಿ: ಉಡುಪಿ ಜಿಲ್ಲಾ ಸಹಕಾರಿ ಬ್ಯಾಂಕ್​ಗಳಲ್ಲಿ ಜಿಲ್ಲೆಯ ಮಲ್ಲಿಗೆ ಕೃಷಿಕರಿಗೆ ನೀಡುತ್ತಿದ್ದ ಸಾಲದ ಮೊತ್ತದಲ್ಲಿ ಕಡಿತ ಮಾಡಿರುವುದನ್ನು ಉಡುಪಿ ಜಿಲ್ಲಾ ಕೃಷಿಕ ಸಂಘ ವಿರೋಧಿಸಿದೆ. ವೈಜ್ಞಾನಿಕವಾಗಿ ಹಾಗೂ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ನಿರ್ವಹಣಾ ವೆಚ್ಚ ನಿರ್ಧರಿಸಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್​ನವರು ಸಾಲದ ಮೊತ್ತ ಹೆಚ್ಚಿಸಿ ಕೃಷಿಕರಿಗೆ ಬೆಂಬಲ ನೀಡುವಂತೆ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಒತ್ತಾಯಿಸಿದ್ದಾರೆ.
ಬ್ಯಾಂಕ್​ನ ನಿರ್ಧಾರದಿಂದ ಮಲ್ಲಿಗೆ ಕೃಷಿಕರಿಗೆ ಸಮಸ್ಯೆಯಾಗಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚು ಇದ್ದಾರೆ. ಜಮೀನು ಕಡಿಮೆ ಇದ್ದರೂ ಅಧಿಕ ಶ್ರಮ ವಹಿಸಿ ಮಲ್ಲಿಗೆ ಬೆಳೆಯುತ್ತಿದ್ದಾರೆ. ಅವರಿಗೆ ಸಕಾಲದಲ್ಲಿ ಅಗತ್ಯದಷ್ಟು ಸಾಲ ಸಿಗದಿದ್ದರೆ ಆರ್ಥಿಕವಾಗಿ ಮತ್ತು ಕೃಷಿಯೂ ನಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಕೃಷಿಗೆ ಹಿನ್ನಡೆ ಸಾಧ್ಯತೆ
ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 5ರಿಂದ 10 ಸೆಂಟ್ಸ್​ ಗರಿಷ್ಠ -20 ಸೆಂಟ್ಸ್​ ಜಮೀನಿನಲ್ಲಿ ಮಲ್ಲಿಗೆ ಕೃಷಿ ಮಾಡುವವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಒಂದು ಸೆಂಟ್ಸ್​ನಲ್ಲಿ 68 ಗಿಡ ನಾಟಿ ಮಾಡಲಾಗುತ್ತದೆ. ಕಳೆದ 3 ವರ್ಷದಿಂದ ಗಿಡಗಳ ಲೆಕ್ಕದಲ್ಲಿ 1 ಸಾವಿರ ರೂ. ಸಾಲ ಲಭಿಸುತ್ತಿತ್ತು. ಇದೀಗ ಅದನ್ನು ಎಕರೆಗೆ 34 ಸಾವಿರ ರೂ. ಸಾಲ ನೀಡಲು ನಿರ್ಧರಿಸಲಾಗಿದೆ. ಇದು ಗಿಡವೊಂದಕ್ಕೆ 350 ರೂ. ಸಾಲ ಸಿಕ್ಕಂತಾಗುತ್ತದೆ. ಅಲ್ಲದೆ, ಮೊದಲಿಗಿಂತ ಬಹಳ ಕಡಿಮೆ ಮಾಡಿದಂತಾಗಿದೆ. ಈ ಕ್ರಮದಿಂದ ಮಲ್ಲಿಗೆ ಕೃಷಿಕರನ್ನು ನಿರ್ಲಕ್ಷ್ಯ ಮಾಡಿದಂತಾಗುತ್ತದೆ ಎಂದು ರಾಮಕೃಷ್ಣ ಶರ್ಮ ತಿಳಿಸಿದ್ದಾರೆ.
"

ಜಿಲ್ಲೆಯ ಮಲ್ಲಿಗೆ ಕೃಷಿಗೆ ಜಿಐ ಮಾನ್ಯತೆಯಿದ್ದು, 10 ಸಾವಿರಕ್ಕೂ ಅಧಿಕ ಕುಟುಂಬ ಈ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ಹಿಂದಿನಂತೆಯೇ ಗಿಡ ಲೆಕ್ಕದಲ್ಲಿ ಮಲ್ಲಿಗೆ ಬೆಳೆ ಸಾಲ ಮುಂದುವರಿಸಿ ಗಿಡವೊಂದಕ್ಕೆ 1,250ಕ್ಕೆ ಹೆಚ್ಚಿಸಿ ನೀಡಬೇಕು. ಜಮೀನು, ನೀರಿನ ಸಮಸ್ಯೆ ಕಾರಣದಿಂದ ಗ್ರೌ ಬ್ಯಾಗ್​ಗಳಲ್ಲಿ ಮಲ್ಲಿಗೆ ಬೆಳೆಸುವವರಿಗೂ ಸಾಲ ಸಿಗಬೇಕು. ತೋಟದಲ್ಲಿ ತೆಂಗು, ಅಡಕೆ, ಗೇರು ಮುಂತಾದ ಮಿಶ್ರ ಬೆಳೆಗಳಿಗೆ ಪ್ರತ್ಯೇಕ ನಿರ್ವಹಣಾ ವೆಚ್ಚ ಸೇರಿಸಿ ಸಾಲ ನೀಡಬೇಕು ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಡಾ. ಎಂ.ಎನ್​. ರಾಜೇಂದ್ರಕುಮಾರ್​ ಅವರಿಗೆ ಮನವಿ ಮಾಡುತ್ತೇನೆ.

— ರಾಮಕೃಷ್ಣ ಶರ್ಮ ಬಂಟಕಲ್ಲು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ.