ಉಡುಪಿ ಜಿಲ್ಲಾ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 'ಮಕ್ಕಳಿಗಾಗಿ ಕಾರಂತರು' ಕಾರ್ಯಕ್ರಮವನ್ನು ಶುಭಾ ಕೆ.ಎನ್. ಉದ್ಘಾಟಿಸಿದರು. ಡಾ. ಗಣನಾಥ್ ಶೆಟ್ಟಿ ಎಕ್ಕಾರು, ರಮೇಶ್ ಹಾಂಡ, ಡಾ.ಚೇತನ್ ಶೆಟ್ಟಿ ಕೋವಾಡಿ, ಡಾ.ಪ್ರಸಾದ್ ರಾವ್, ಡಾ.ಭಾರತಿ ಮರವಂತೆ, ಸುರೇಂದ್ರ ಇದ್ದರು.
* ಡಾ.ಗಣನಾಥ್ ಶೆಟ್ಟಿ ಎಕ್ಕಾರು ಅಭಿಪ್ರಾಯ
* 'ಮಕ್ಕಳಿಗಾಗಿ ಕಾರಂತರು' ಕಾರ್ಯಕ್ರಮ
ಉಡುಪಿ: ಉತ್ತಮ ಬದುಕು ರೂಪಿಸಿಕೊಳ್ಳಲು ಪುಸ್ತಕಗಳು ಮಾರ್ಗದರ್ಶಕವಾಗಿವೆ. ವಿದ್ಯಾರ್ಥಿಗಳು ಓದುವ ಹವ್ಯಾಸ ರೂಪಿಸಿಕೊಂಡು ಎಲ್ಲ ವಿಚಾರಗಳ ಜ್ಞಾನ ಹೊಂದಿರುವುದೂ ಅತಿ ಅವಶ್ಯಕ. ಶಿವರಾಮ ಕಾರಂತರು ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬದುಕಿನ ಮೌಲ್ಯ ತಿಳಿಸಿದ್ದ ಅವರು ಸಾರ್ಥಕ ಬದುಕಿಗೆ ಸಾಯಾಗಿದ್ದರು ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಕುಂದಾಪುರದ ಎಚ್.ಎಂ.ಎಂ. ಮತ್ತು ವಿ.ಕೆ.ಆರ್. ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆಯಲ್ಲಿ ಕಾರಂತರನ್ನು ಪರಿಚಯಿಸುವ 'ಮಕ್ಕಳಿಗಾಗಿ ಕಾರಂತರು' ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡ ಮಾತನಾಡಿ, ಡಾ. ಕಾರಂತರು ಕನ್ನಡ ನಾಡು ಕಂಡ ಅಪರೂಪದ ಬಹುಮುಖ ಪ್ರತಿಭೆ. ಮಕ್ಕಳು ಚಿತ್ರಗಳ ಮೂಲಕ ಕಾರಂತರು ತಿಳಿಸಿದ್ದ ಮೌಲ್ಯಗಳನ್ನು ತಿಳಿದುಕೊಳ್ಳಲು ಇದು ಉತ್ತಮ ಅವಕಾಶ. ಕಾರಂತರ ಆದರ್ಶಗಳನ್ನು ತಿಳಿದು ತಾವುಗಳೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಾಲೆಯ ಉಪಪ್ರಾಂಶುಪಾಲೆ ಶುಭಾ ಕೆ.ಎನ್. ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.
ಟ್ರಸ್ಟ್ನ ಸದಸ್ಯ ಡಾ.ಪ್ರಸಾದ್ ರಾವ್ ಸ್ವಾಗತಿಸಿದರು. ಸದಸ್ಯೆ ಡಾ.ಭಾರತಿ ಮರವಂತೆ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಉಪನ್ಯಾಸಕ ಸುರೇಂದ್ರ ವಂದಿಸಿದರು.
"
ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ಕರಾವಳಿ ಭಾಗದ ಮಹಾನ್ ವ್ಯಕ್ತಿ. ವಿದ್ಯಾರ್ಥಿಗಳಿಗೆ ಅವರ ಚಿಂತನೆ ಹಾಗೂ ಆದರ್ಶನಗಳನ್ನು ಚಿತ್ರದ ಮೂಲಕ ಪರಿಚಯಿಸುತ್ತಿರುವ ಟ್ರಸ್ಟ್ನ ಕಾರ್ಯ ಅರ್ಥಪೂರ್ಣ.
— ಶುಭಾ ಕೆ.ಎನ್. ಉಪಪ್ರಾಂಶುಪಾಲೆ.