ಉಡುಪಿಯ ಜೋಡುಕಟ್ಟೆಯ ಪೂರ್ಣಪ್ರಜ್ಞ ಮಂಟಪದ ಬಳಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ಹಸಿರು ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಗೆ ಜಯಕರ್ ಶೆಟ್ಟಿ ಇಂದ್ರಾಳಿ ಚಾಲನೆ ನೀಡಿದರು. ಸುಪ್ರಸಾದ್ ಶೆಟ್ಟಿ ಬೈಕಾಡಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಆಶೋಕಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ದಿವಾಕರ್ ಶೆಟ್ಟಿ ಕಾಪು, ವಿಜಯಕುಮಾರ್ ಉದ್ಯಾವರ, ವೈ.ಸುಧೀರ್ ಇತರರಿದ್ದರು.
* ಶೀರೂರು ಪರ್ಯಾಯಕ್ಕೆ ಹಸಿರು ಹೊರೆಕಾಣಿಕೆ
* ಮೆರವಣಿಗೆಗೆ ಜಯಕರ್ ಶೆಟ್ಟಿ ಇಂದ್ರಾಳಿ ಚಾಲನೆ
ಉಡುಪಿ: ಶ್ರೀಕೃಷ್ಣನ ಆರಾಧನೆಯ, ಪೂಜಾ ಕೈಂಕರ್ಯದ ಪರ್ಯಾಯವೆಂದರೆ ಅದು ಉಡುಪಿಯ ನಾಡಹಬ್ಬ. ಈ ಬಾರಿ ಶೀರೂರು ಮಠದ ಪರ್ಯಾಯ ಜ.18ರಿಂದ ಆರಂಭಗೊಳ್ಳಲಿದೆ. ಪರ್ಯಾಯದ ಪ್ರಮುಖ ಸೇವಾಕಾರ್ಯವಾದ ಹೊರೆಕಾಣಿಕೆ ಸಮರ್ಪಣೆಯೂ ಸಹ ಉಡುಪಿಯ ಸಂಪ್ರದಾಯವಾಗಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ಮಾರ್ಗದರ್ಶನದಲ್ಲಿ ಎಲ್ಲ ಸಹಕಾರಿಗಳ ಸಹಕಾರದಲ್ಲಿ ಶ್ರೀಕೃಷ್ಣನ ಅನ್ನಪ್ರಸಾದಕ್ಕಾಗಿ ಹಸಿರು ಹೊರೆಕಾಣಿಕೆ ಸಮರ್ಪಿಸುತ್ತಿದ್ದೇವೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಹೇಳಿದರು.
ಉಡುಪಿಯ ಶೀರೂರು ಮಠದ ಪರ್ಯಾಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಎಲ್ಲ ಸಹಕಾರಿಗಳ ಸಹಕಾರದಲ್ಲಿ ಜೋಡುಕಟ್ಟೆಯ ಪೂರ್ಣಪ್ರಜ್ಞ ಮಂಟಪದ ಬಳಿ ಹಸಿರು ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಗೆ ಭಾನುವಾರ (ಜ.11) ಚಾಲನೆ ನೀಡಿ ಮಾತನಾಡಿದರು.
ಶೀರೂರು ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಮಾತನಾಡಿ, ಶೀರೂರು ಪರ್ಯಾಯಕ್ಕೆ ಹೊರೆಕಾಣಿಕೆ ಸಮರ್ಪಿಸಿ, ಶ್ರೀಕೃಷ್ಣನ ಭಕ್ತರಿಗೆ ಪ್ರಸಾದ ಭೋಜನ ನೀಡಲು ಸಹಕರಿಸಿದ ಎಲ್ಲರಿಗೂ ಶೀರೂರು ಮಠದ ವೇದವರ್ಧನ ಶ್ರೀಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಆಶೋಕಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ದಿವಾಕರ್ ಶೆಟ್ಟಿ ಕಾಪು, ವಿಜಯಕುಮಾರ್ ಉದ್ಯಾವರ, ರಾಜೇಶ್ ದೇವಾಡಿಗ, ರಾಜೇಶ್ ಹೆಗ್ಡೆ, ಶರತ್ ಶೆಟ್ಟಿ, ವೈ.ಸುಧೀರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ಸಿಇಒ ಅನೂಷಾ ಕೋಟ್ಯಾನ್, ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್ಗಳ ಮೆನೇಜರ್, ಮಹಿಳಾ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನೂರಾರು ವಾಹನಗಳಲ್ಲಿ ಹಸಿರು ಹೊರಕಾಣಿಕೆಯನ್ನು ವಿವಿಧ ವಾದ್ಯ, ಬ್ಯಾಂಡ್ ಸೆಟ್ಗಳ ಸಂಭ್ರಮದೊಂದಿಗೆ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿರುವ 'ಅನ್ನ ವಿಠ್ಠಲ' ಉಗ್ರಾಣಕ್ಕೆ ಸಾಗಿಸಲಾಯಿತು.
ಪೊಡವಿಗೊಡೆಯನ ಸೇವೆಯ ಸದವಕಾಶ
ಗೀತಾಚಾರ್ಯನಾದ ಶ್ರೀಕೃಷ್ಣನು ಪೊಡವಿಗೊಡೆಯನಾಗಿದ್ದಾನೆ. ಆತನ ಪೂಜಾ ಕೈಂಕರ್ಯದ ಪರ್ಯಾಯದ ಸಂದರ್ಭದಲ್ಲಿ ಭಕ್ತರಾದ ನಮಗೆಲ್ಲ ಸೇವೆ ಸಲ್ಲಿಸಲು ಹೊರೆಕಾಣಿಕೆಯ ಸಮರ್ಪಣೆ ಸದವಕಾಶವಾಗಿದೆ ಎಂದು ನಗರಸಭಾ ಸದಸ್ಯ ಕೃಷ್ಣರಾಜ ಕೊಡಂಚ ತಿಳಿಸಿದರು.
ಶೀರೂರು ಪರ್ಯಾಯದ ನಿಮಿತ್ತ ಜೋಡುಕಟ್ಟೆಯ ಬಳಿ ಉಡುಪಿ ತಾಲೂಕು ಬ್ರಾಹ್ಮಣ ಸಭಾದ ವತಿಯಿಂದ ಸಮರ್ಪಿಸಲ್ಪಟ್ಟ ಹಸಿರು ಹೊರೆಕಾಣಿಕೆಗಳ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಉಡುಪಿ ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯ, ಉಡುಪಿ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಸಂದೀಪ್ ಮಂಜ, ಜತೆ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ಶೀರೂರು ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ, ಜಯಪ್ರಕಾಶ್ ಕೆದ್ಲಾಯ, ಯು.ಬಿ. ಶ್ರೀನಿವಾಸ್, ಶೋಭಾ ಉಪಾಧ್ಯಾಯ, ತಾಲೂಕು ಬ್ರಾಹ್ಮಣ ಸಭಾದ 25 ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಉಡುಪಿ ಶೀರೂರು ಪರ್ಯಾಯಕ್ಕೆ ಉಡುಪಿ ತಾಲೂಕು ಬ್ರಾಹ್ಮಣ ಸಭಾದ ವತಿಯಿಂದ ಸಮರ್ಪಿಸಿದ ಹಸಿರು ಹೊರೆಕಾಣಿಕೆಯನ್ನು ಮೆರವಣಿಗೆ ಮೂಲಕ ಸಾಗಿಸಲಾಯಿತು. ಕೃಷ್ಣರಾಜ ಕೊಡಂಚ, ಶ್ರೀಕಾಂತ್ ಉಪಾಧ್ಯ, ಸಂದೀಪ್ ಮಂಜ, ವಿಷ್ಣುಪ್ರಸಾದ್ ಪಾಡಿಗಾರ್ ಇತರರಿದ್ದರು.