ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು. ವರಲಕ್ಷ್ಮೀ, ಭಾರತಿ, ಯಶೋದಾ, ಸುಶೀಲಾ ನಾಡ ಹಾಗೂ ಸಂದ ಸದಸ್ಯರು ಇದ್ದರು.
* ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವರಲಕ್ಷ್ಮೀ ಪ್ರಶ್ನೆ
* ಡಿಸಿ ಕಚೇರಿ ಬಳಿ ಅಂಗನವಾಡಿ ನೌಕರರ ಪ್ರತಿಭಟನೆ
ಉಡುಪಿ: ಎಸ್ಐಆರ್ ಎಂಬ ಪೆಡಂಭೂತ ಎದುರಿಸಲು ಪೂರಕ ವಾತಾವರಣ, ಸೂಕ್ತ ತರಬೇತಿ ಕೊಟ್ಟಿಲ್ಲ. ರಾಜ್ಯದ 69 ಸಾವಿರ ಅಂಗನವಾಡಿಗಳಲ್ಲಿ 1.69 ಲಕ್ಷ ಕಾರ್ಯಕರ್ತರಿದ್ದು 25 ಸಾವಿರ ಮಂದಿಗೆ ಬಿಎಲ್ಒ ಹೊಣೆಗಾರಿಕೆ ವಹಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರಿಗೆ ಎಸ್ಐಆರ್ ಹೊಣೆ ವಹಿಸಿದರೆ ಅಂಗನವಾಡಿ ನಡೆಸೋರು ಯಾರು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆ ಮುಂದಿಟ್ಟು ಸೋಮವಾರ (ಜು.13) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಉಡುಪಿ ಜ್ಲಿಲೆಯ 1,222 ಅಂಗನವಾಡಿ ಕೇಂದ್ರಗಳ 710 ಕಾರ್ಯಕರ್ತರಿಗೆ ಬಿಎಲ್ಒ ಜವಾಬ್ದಾರಿ ವಹಿಸಲಾಗಿದೆ ಎಂದರು.
ಸಕಾರದಿಂದಲೇ ಅಂಗನವಾಡಿಯ ಕಗ್ಗೊಲೆ
ಮಕ್ಕಳಿಗೆ ಪೌಷ್ಟಿಕ ಆಹಾರ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೂರಕ ಆಹಾರ ಪೂರೈಕೆ ಹಾಗೂ ಮಾನವ ಸಂಪನ್ಮೂಲ ಸೃಷ್ಟಿ ನಮ್ಮ ಧ್ಯೇಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ., ಯುಕೆಜಿ ಮಾಡಿಸಿ ನಾಲ್ಕು ವರ್ಷ ತುಂಬಿದ ಮಕ್ಕಳನ್ನು ಒಯ್ಯುತ್ತಿದ್ದಾರೆ. ಐಸಿಡಿಎಸ್ ಹಾಗೂ ಅಂಗನವಾಡಿಯನ್ನು ರಾಜ್ಯ ಸರ್ಕಾರವೇ ಯೋಜನಾಬದ್ಧವಾಗಿ ಕೊಲ್ಲುತ್ತಿದೆ ಎಂದು ಆರೋಪಿಸಿದರು.
ಮಾನವೀಯತೆ ಇಲ್ಲದ ಆಡಳಿತ
60 ವರ್ಷ ಪೂರೈಸಿದ ಅಂಗನವಾಡಿ ಕಾರ್ಯಕರ್ತರಿಗೆ ನೀಡುವ 40 ಸಾವಿರ ರೂ. ಇಡಗಂಟನ್ನು ಉಡುಪಿ, ಕಾರ್ಕಳ ತಾಲೂಕಿನಲ್ಲಿ ನೀಡಿಲ್ಲ. ಮಾನವೀಯತೆ ತೋರದೆ ಮೂವರು ಅಂಗನವಾಡಿ ಕಾರ್ಯಕರ್ತರನ್ನು ಅಮಾನತು ಮಾಡಲಾಗಿದೆ. ಆರು ತಿಂಗಳಿನಿಂದ ಸಂಬಳವಿಲ್ಲ. ಬಿಎಲ್ಒ ಆಗಿ ಕೆಲಸ ಮಾಡುತ್ತಿರುವವರಿಗೆ ಚುನಾವಣಾ ಕರ್ತವ್ಯದ ನೆಪದಲ್ಲಿ ಹಿಂಸೆ ನೀಡಲಾಗುತ್ತಿದೆ. ಮಕ್ಕಳು ಕಡಿಮೆ ಇದ್ದಾರೆಂದು 15 ಕಾರ್ಯಕರ್ತರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಕ್ಷರ ದಾಸೋಹಕ್ಕೆ ಕಳಪೆ ಗುಣಮಟ್ಟದ ಅಕ್ಕಿ, ಬೇಳೆ ನೀಡಲಾಗುತ್ತಿದೆ. ಅಂಗನವಾಡಿ ಮಕ್ಕಳಿಗೆ ಸ್ಥಳಿಯ ಆಹಾರವನ್ನೇ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಭಾರತಿ, ಜಿಲ್ಲಾ ಖಜಾಂಚಿ ಯಶೋದಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ ಹಾಗೂ ಸಂಘೆದ ಸದಸ್ಯರು ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳು
ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ 7 ಸಾವಿರ ರೂ.ಗೆ ವೇತನ ಹೆಚ್ಚಳ, ದಿನದಲ್ಲಿ 6 ಗಂಟೆಯ ಕೆಲಸಕ್ಕೆ ನಿಗದಿಸಿ ಸುತ್ತೋಲೆ, ಸೂಕ್ತ ಆರೋಗ್ಯ ವಿಮೆ, ಮುಖ್ಯ ಅಡುಗೆಯವರಿಗೇ ಸಾಧಿಲ್ವಾರು ಜಂಟಿ ಖಾತೆ ನೀಡುವುದು, ಕೆಪಿಎಸ್ ಶಾಲೆಗಳು, ಇಸ್ಕಾನ್, ಮಠ ಹಾಗೂ ಇತರ ಖಾಸಗಿ ಸಂಸ್ಥೆಗಳಿಗೆ ಯೋಜನೆ ನೀಡದಿರುವುದು, ನೌಕರರನ್ನು ಕೆಲಸದಿಂದ ತೆಗೆಯುವ ನೀತಿ ಕೈಬಿಡುವುದು, ಎಂಡಿಎಂ ಯೋಜನೆಗೆ ಸಮರ್ಪಕ ಅನುದಾನ ನಿಗದಿ, ನಿವೃತ್ತರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ, ವಜಾಗೊಂಡ ಕಾರ್ಯಕರ್ತೆಯರ ಪುನರ್ ನೇಮಕ, ಅನಾರೋಗ್ಯದಿಂದ ಬಳಲುತ್ತಿರುವ 50 ವರ್ಷ ಮೀರಿದ ಕಾರ್ಯಕರ್ತೆಯರು, ಸಹಾಯಕಿಯರನ್ನು ಚುನಾವಣಾ ಕೆಲಸದಿಂದ ಕೈಬಿಡುವುದು. ಚುನಾವಣಾ ಕೆಲಸದ ಒತ್ತಡಕ್ಕೆ ಹೆದರಿ ರಾಜೀನಾಮೆ ನೀಡಿದ ಕಾರ್ಯಕರ್ತೆಯರಿಗೆ ಮತ್ತೆ ಕೆಲಸ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.