ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಪ್ರಥ್ವಿರಾಜ್ ಶೆಟ್ಟಿ ಮನವಿ ಸಲ್ಲಿಸಿದರು. ವಿಖ್ಯಾತ್ ಶೆಟ್ಟಿ, ಅಭಿರಾಜ್ ಸುವರ್ಣ, ಪ್ರದೀಪ್ ಕುಂದರ್, ಗುರುರಾಜ್ ಎಂ. ಇತರರಿದ್ದರು.
* ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಆಗ್ರಹ
* ಉಡುಪಿ ಎಸ್ಪಿ ಹರಿರಾಮ್ ಶಂಕರ್ಗೆ ಮನವಿ ಸಲ್ಲಿಕೆ
ಉಡುಪಿ: ವಂದೇ ಮಾತರಂ ರಾಷ್ಟ್ರೀಯ ಗೀತೆಯನ್ನು ಸಂಪೂರ್ಣ ಹಾಡುವುದಿಲ್ಲ ಎಂದು ಹೇಲಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಆಗ್ರಹಿಸಿದರು.
ಉಡುಪಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಸೋಮವಾರ (ಆ.24) ನಿಯೋಗದೊಂದಿಗೆ ತೆರಳಿ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿಸಿ ಈಗಾಗಲೇ ಸಂಸತ್ತಿನಲ್ಲಿ ಅನುಮೋದಿಸಿದೆ. ಅದಕ್ಕೆ ರಾಷ್ಟ್ರಪತಿಗಳ ಅಂಕಿತವೂ ಆಗಿದೆ. ಆದರೂ ಆ ಗೀತೆಯನ್ನು ಸಂಪೂರ್ಣ ಹಾಡುವುದಿಲ್ಲ ಎಂದಿರುವುದು ಸಂವಿಧಾನ ಹಾಗೂ ದೇಶ ವಿರೋಧಿ ಹೇಳಿಕೆಯಾಗಿದೆ. ಅವರ ವರ್ತನೆಯನ್ನು ನಾವು ಖಂಡಿಸುತ್ತೇವೆ ಎಂದರು.
ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಭಿರಾಜ್ ಸುವರ್ಣ, ಪ್ರದೀಪ್ ಕುಂದರ್, ಜಿಲ್ಲಾ ಉಪಾಧ್ಯಕ್ಷರಾದ ಗುರುರಾಜ್ ಎಂ., ಪ್ರಥ್ವಿರಾಜ್ ಮಣಿಪಾಲ, ಸಚಿನ್ ಪಿತ್ರೋಡಿ, ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶ್ರೀವತ್ಸ, ಸೋನು ಪಾಂಗಳ, ಸುಶಾಂತ್ ಪೂಜಾರಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.