ಉಡುಪಿಯಲ್ಲಿ ಆಯೋಜಿಸಿದ್ದ ಚೆಸ್ ಸ್ಪರ್ಧೆಗೆ ಯಶ್ಪಾಲ್ ಸುವರ್ಣ ಹಾಗೂ ಕುತ್ಯಾರು ನವೀನ್ ಶೆಟ್ಟಿ ಚಾಲನೆ ನೀಡಿದರು. ಪ್ರಭಾಕರ್ ಪೂಜಾರಿ, ರುಡಾಲ್ಫ್ ಡಿಸೋಜಾ, ಡೆನಿಸ್ ಮಸ್ಕರೇನಸ್, ಅನಿತಾ ಡಿಸೋಜಾ, ಮೈಕಲ್ ಡಿಸೋಜಾ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯ
* ಪ್ರಧಾನಿ ಮೋದಿ ಜನ್ಮದಿನದ ನಿಮಿತ್ತ ಚೆಸ್ ಸ್ಪರ್ಧೆ
ಉಡುಪಿ: ಗುಜರಾತ್ ರಾಜ್ಯದಲ್ಲಿ 13 ವರ್ಷ ಮುಖ್ಯಮಂತ್ರಿಯಾಗಿ, 2014ರಿಂದ ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡುವ ಮೂಲಕ ನರೇಂದ್ರ ಮೋದಿ ಅವರು ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅವರ ಚಿಂತನೆ, ಸಂಕಲ್ಪ ಹಾಗೂ ಕಾರ್ಯಕ್ಷಮತೆ ಯುವಜನತೆಗೆ ಸ್ಫೂರ್ತಿಯಾಗಿದೆ. ಕ್ರೀಡಾ ಚಟುವಟಿಕೆಯಿಂದ ದೈಹಿಕ ಸಾಮರ್ಥ್ಯ, ಚೆಸ್ ಪಂದ್ಯದಿಂದ ಬೌದ್ಧಿಕ ಸಾಮರ್ಥ್ಯ ಹೆಚ್ಚಳವಾಗಲಿದ್ದು, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ನಿಮಿತ್ತ ಉಡುಪಿಯ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ಭಾನುವಾರ (ಸೆ.20) ಆಯೋಜಿಸಿದ್ದ ಚೆಸ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಚುನಾವಣೆಗಷ್ಟೇ ಸೀಮಿತವಾಗಿಲ್ಲ. ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳೂ ಪ್ರಥಮಾದ್ಯತೆಯಾಗಿವೆ. ಪ್ರಧಾನಿ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಅರ್ಥಪೂರ್ಣವಾಗಿಸಲು ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಚೆಸ್ ಪಂದ್ಯಾಟ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೆನಿಸ್ ಮಸ್ಕರೇನಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖ್ ಆಸೀಫ್, ಜಿಲ್ಲಾ ಉಪಾಧ್ಯಕ್ಷ ಮೈಕಲ್ ಡಿಸೋಜಾ, ಕಾರ್ಯದರ್ಶಿ ಅನಿತಾ ಬೆಲಿಂಡ ಡಿಸೋಜಾ, ಅನಿಲ್ ಅಂಬಲಪಾಡಿ, ಕೋಶಾಧಿಕಾರಿ ಗ್ಲೆನ್ ಮೋನಿಸ್, ಸಲೀಮ್ ಅಂಬಾಗಿಲು ಇನ್ನಿತರರು ಉಪಸ್ಥಿತರಿದ್ದರು. ನವೀನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಚೆಸ್ ಸ್ಪರ್ಧೆಯಲ್ಲಿ 163 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಚೆಸ್ ಬೌದ್ಧಿಕ ಸಾಮರ್ಥ್ಯ ಹೆಚ್ಚುವ ಕ್ರೀಡೆಯಾಗಿದ್ದು ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗಲಿದೆ. ಪ್ರಧಾನಿ ಮೋದಿ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ತುಂಬಲು, ಯುವಜನತೆಗೆ ಅವರ ವಿಚಾರಧಾರೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.