ಉಡುಪಿಯ ಪತ್ರಿಕಾ ಭವನದಲ್ಲಿ ಪ್ರಸಾದ್ರಾಜ್ ಕಾಂಚನ್ ಮಾತನಾಡಿದರು. ಎ.ಕೆ. ಹುಸೇನ್, ವಿನಯ್, ನಂದಕಿಶೋರ್ ಇದ್ದರು.
* ಅಸೋಸಿಯೇಷನ್ ಅಧ್ಯಕ್ಷ ಪ್ರಸಾದ್ರಾಜ್ ಮಾಹಿತಿ
* ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಉಚಿತ ತರಬೇತಿ
ಉಡುಪಿ: ಉಡುಪಿ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ವತಿಯಿಂದ ಮಣಿಪಾಲದ ಮಾಧವಕೃಪಾ ಶಾಲೆಯಲ್ಲಿ ಏ.20ರಂದು ಉಡುಪಿ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಮತ್ತು ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾಟದ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಏ.18) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10:30ಕ್ಕೆ ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಉದ್ಘಾಟಿಸಲಿದ್ದು, ಪ್ರಸಾದ್ರಾಜ್ ಕಾಂಚನ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ನ ಅಧ್ಯಕ್ಷ ಹರಿಪ್ರಸಾದ್ ರೈ, ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಮಾಜಿ ಆಟಗಾರ ಜುಗನ್ ಎಸ್. ಧ್ಯಾನೇಶ್ವರನ್, ಮಾಧವಕೃಪಾ ಶಾಲೆಯ ಚಂದ್ರಶೇಖರ್ ಪ್ರಭು ಎನ್., ಪ್ರಾಂಶುಪಾಲೆ ಸ್ವಾತಿ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕ್ರೀಡಾಪಟುಗಳಿಗೆ ಉತ್ತೇಜನ
ಜಿಲ್ಲೆಯ ಬಾಸ್ಕೆಟ್ಬಾಲ್ ಕ್ರೀಡಾಳುಗಳಿಗೆ ಅಧಿಕೃತವಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉಡುಪಿ ಜಿಲ್ಲೆ ಪ್ರತಿನಿಧಿಸಲು ಅವಕಾಶ ಇರಲಿಲ್ಲ. ಅಂತಹ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು, ರಾಜ್ಯ ಹಾಗೂ ರಾಷ್ಟ್ರೀಯ ಅಸೋಸಿಯೇಷನ್ ಸಹಕಾರದಿಂದ ಜಿಲ್ಲಾ ಮಟ್ಟದ ಅಸೋಸಿಯೇಷನ್ ಆರಂಭಿಸಿದ್ದೇವೆ ಎಂದರು.
ಅಸೋಸಿಯೇಷನ್ನ ಕಾರ್ಯದರ್ಶಿ ಎ.ಕೆ. ಹುಸೇನ್ ಮಾತನಾಡಿ, 14, 17 ಹಾಗೂ 19ರ ವಯೋಮಾನದ ಮೂರು ವಿಭಾಗ ಮಾಡಲಾಗಿದ್ದು ಬಾಲಕ, ಬಾಲಕಿಯರ ಪ್ರತ್ಯೇಕ ಪಂದ್ಯಾಟ ನಡೆಯಲಿದೆ. ಈಗಾಗಲೇ 18 ತಂಡ ನೋಂದಣಿ ಮಾಡಿಕೊಂಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ವಿನಯ್, ಅಸೋಸಿಯೇಷನ್ ಸದಸ್ಯ ನಂದಕಿಶೋರ್ ಉಪಸ್ಥಿತರಿದ್ದರು.
ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಬಾಸ್ಕೆಟ್ಬಾಲ್ ಕೋರ್ಟ್ ಶ್ರೀವೇ ಸುಸಜ್ಜಿತಗೊಳಿಸಲಾಗುವುದು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಮ್ಮ ಜಿಲ್ಲೆಯ ಮಕ್ಕಳು ಸಾಧನೆ ಮಾಡುವಂತಾಗಲು ಅವರಿಗೆ ಉಟೋಪಚಾರ ಸಹಿತವಾಗಿ ಉಚಿತ ತರಬೇತಿ ನೀಡಲು ಚಿಂತನೆ ನಡೆಸಿದ್ದೇವೆ. ಡಾ ಕ್ಷೇತ್ರದಲ್ಲೂ ಸಾಮಾಜಿಕ ಸೇವೆ ನೀಡುವ ಉದ್ದೇಶ ನಮ್ಮದು.