ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಕುಂದಾಪುರ ತಾಲೂಕಿನ ಶಂಕರನಾರಾಯಣದ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿಯನ್ನು ಶಾಲೆಯಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ. ಸನ್ಮಾನಿಸಿ ಗೌರವಿಸಿದರು. ಕುಂದಾಪುರದ ಬಿಇಒ ಶೋಭಾ ಎಚ್. ಶೆಟ್ಟಿ, ತಾಲೂಕು ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ರಾಜ ಖಾರ್ವಿ, ಶಿಕ್ಷಣ ಸಂಯೋಜಕ ಶೇಖರ್ ಯು., ಶಾಲೆಯ ಸಂಸ್ಥಾಪಕಿಯರಾದ ರೆನಿಟಾ ಲೋಬೋ, ಶಮಿತಾ ರಾವ್, ಶಾಲೆಯ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಯ ತಾಯಿ ನಾಗರತ್ನಾ ಉಪಸ್ಥಿತರಿದ್ದರು.
* ತಾಲೂಕಾವಾರು ಫಲಿತಾಂಶದಲ್ಲಿ ಗಣನೀಯ ಏರಿಕೆ
* ಅನುದಾನ ರಹಿತ ಶಾಲೆಗಳ ಸಾಧನೆಯ ಹೆಗ್ಗಳಿಕೆ
ಉಡುಪಿ: ಜಿಲ್ಲೆಯ 179 ಪ್ರೌಢಶಾಲೆಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದು, ತಾಲೂಕಾವಾರು ಫಲಿತಾಂಶದಲ್ಲೂ ಸಹ ಈ ಬಾರಿ ಏರಿಕೆ ಕಂಡಿದೆ. ಕಳೆದ ಬಾರಿ ಕೇವಲ 57 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದ್ದವು. ಕಾರ್ಕಳ ತಾಲೂಕು ಶೇ.99.02, ಕುಂದಾಪುರ ಶೇ.98.52, ಬ್ರಹ್ಮಾವರ ಶೇ.98.26, ಬೈಂದೂರು ಶೇ.97.91, ಉಡುಪಿ ಶೇ.97.21 ಫಲಿತಾಂಶ ದಾಖಲಾಗಿದೆ.
ಕನ್ನಡ, ಆಂಗ್ಲ ಭಾಷೆ ಫಲಿತಾಂಶ
ಈ ಬಾರಿ ಇಂಗ್ಲಿಷ್ ಭಾಷೆಗಿಂತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಶೇಕಡಾವಾರು ಫಲಿತಾಂಶದಲ್ಲಿಯೂ ಸಾಧನೆ ಮಾಡಿದ್ದಾರೆ. ಕನ್ನಡ ಶೇ.96.66 ಹಾಗೂ ಇಂಗ್ಲಿಷ್ 99.22 ಫಲಿತಾಂಶ ಬಂದಿದೆ. ಗ್ರಾಮೀಣ ಹಾಗೂ ನಗರ ಫಲಿತಾಂಶದಲ್ಲಿ ನಗರದ ವಿದ್ಯಾರ್ಥಿಗಳು ಗ್ರಾಮೀಣರಿಗಿಂತ 0.06 ಫಲಿತಾಂಶ ಹೆಚ್ಚು ಗಳಿಸಿರುವುದು ಕಂಡುಬಂದಿದೆ. ಗ್ರಾಮೀಣ ಶೇ.98.16 ಹಾಗೂ ನಗರ ಶೇ.98.22 ಫಲಿತಾಂಶ ಗಳಿಸಿದೆ.
ಈ ಬಾರಿಯ ಪರೀಕ್ಷೆಯಲ್ಲಿ ಅನುದಾನ ರಹಿತ ಶಾಲೆಗಳ ಫಲಿತಾಂಶ ಅತ್ಯುತ್ತಮವಾಗಿದೆ. ಸರ್ಕಾರಿ ಶಾಲೆ ಶೇ.97.61, ಅನುದಾನಿತ ಶಾಲೆ ಶೇ.97.24 ಹಾಗೂ ಅನುದಾನ ರಹಿತ ಶಾಲೆಗಳು ಶೇ.99.39 ಫಲಿತಾಂಶದೊಂದಿಗೆ ದಾಖಲೆ ಮೆರೆದಿದೆ.
ಜಿಲ್ಲೆಯ ಟಾಪರ್ಸ್ ವಿದ್ಯಾರ್ಥಿಗಳಿವರು
ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಮದರ್ ಥೆರೆಸಾ ಮೆಮೋರಿಯಲ್ ಸ್ಕೂಲ್ನ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಅಂಕ, ಕುಂದಾಪುರದ ಶ್ರೀ ವೆಂಕಟರಮಣ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಅನ್ವರ್ಥ್ ಪೂಜಾರಿ 624 ಅಂಕ, ಕಾರ್ಕಳ ತಾಲೂಕು ಬೈಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಲಿಸಾ ಬಾಬೋರ್ಜಾ, ಕಾರ್ಕಳ ತಾಲೂಕಿ ಕುಕ್ಕುಂದೂರು ಗಣಿತ ನಗರದ ಕಾರ್ಕಳ ಜನಸುಧಾ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ಮಹಾಲಕ್ಷ್ಮೀ ಬಿ. 624 ಅಂಕ ಹಾಗೂ ಮಹಾಲಕ್ಷ್ಮೀ ಪೈ ಬಿ. 624 ಅಂಕ, ಬ್ರಹ್ಮಾವರ ತಾಲೂಕಿನ ಕೋಟದ ವಿವೇಕ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ಚೈತನ್ಯಶ್ರೀ ಆರ್. ಉಡುಪ, ಕುಂದಾಪುರ ತಾಲೂಕಿನ ಶ್ರಿ ವೆಂಕಟರಮಣ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ಪ್ರಾರ್ಥನಾ ಜಿ., ಸಾತ್ವಿಕ್ ಎಸ್. ಭಟ್ ಹಾಗೂ ತಕ್ಷಾ ಪಿ. ಶೆಟ್ಟಿ ತಲಾ 623 ಅಂಕ, ಕಾರ್ಕಳ ಜನಸುಧಾ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ವೈಷ್ಣವಿ ಶೆಟ್ಟಿಗಾರ್ 623 ಅಂಕ, ಕೋಟ ವಿವೇಕ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಸಂಕಲ್ಪ ಕುಮಾರ್ 622 ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಗಮನ ಸೆಳೆದ 2 ಸಂಗತಿ
ಪಡುಬಿದ್ರಿ ಹೆಜಮಾಡಿ ಕೋಡಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಬಸವರಾಜ್ ಎಂಬಾತ ಎಸ್ಎಸ್ಎಲ್ಸಿ ಪ್ರಿಪರೇಟರಿ ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೀಗಾಗಿ ಡಿಡಿಪಿಐ ಲೋಕೇಶ್ ಸಿ. ಹಾಗೂ ಶಿಕ್ಷಕರು, ಅಧಿಕಾರಿಗಳ ತಂಡ ಆತನ ಮನೆಗೆ ತೆರಳಿ, ಮನವೊಲಿಸಿ ಪರೀಕ್ಷೆಗೆ ಕರೆತಂದಿದ್ದರು. ಆ ವಿದ್ಯಾರ್ಥಿಯೂ ಸಹ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಕಾರ್ಕಳದ ಅನುದಾನಿತ ವಸತಿ ಶಾಲೆಯ ವಿದ್ಯಾರ್ಥಿಯೋರ್ವ ಪ್ರಕರಣವೊಂದಕ್ಕೆ ಸಂಬಂಧಿಸಿ, ಕಾನೂನು ಸಂರ್ಷಕ್ಕೆ ಒಳಗಾಗಿದ್ದ ಕಾರಣದಿಂದ ಆತನನ್ನು ಉಡುಪಿಯ ಮಕ್ಕಳ ಕಲ್ಯಾಣ ಸಮಿತಿಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಇಲಾಖೆಯ ಕೌನ್ಸೆಲರ್ ಇವರ ತಂಡ ಕಾನೂನಾತ್ಮಕವಾಗಿ ವಿದ್ಯಾರ್ಥಿಯನ್ನು ಕಾರ್ಕಳದ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷೆ ಬರೆಸಿದ್ದರು. ಆ ವಿದ್ಯಾರ್ಥಿಯೂ ಸಹ ಉತ್ತೀರ್ಣ ಆಗಿರುವುದಾಗಿ ಡಿಡಿಪಿಐ ಲೋಕೇಶ್ ಸಿ. ಮಾಹಿತಿ ನೀಡಿದ್ದಾರೆ.