ಉಡುಪಿ ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರ ಸಂಘದ ಪದಾಧಿಕಾರಿಗಳು ಡಿಸಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು. ಶಿವಾನಂದ್ ಪ್ರಭು ಬೈಂದೂರು, ರಾಜೀವ ಶೆಟ್ಟಿ ಶಿರಿಯಾರ, ವೈ. ಗಣಪತಿ ಕಾಮತ್, ಪೂರ್ಣಿಮಾ ಜೆ.ಸಿ., ಚಂದ್ರಶೇಖರ್ ನಾಯ್ಕ್, ಮಾರಾಟಗಾರರು ಇದ್ದರು.
* ಉಡುಪಿ ಜಿಲ್ಲಾಡಳಿತಕ್ಕೆ ಶಿವಾನಂದ್ ಪ್ರಭು ಬೈಂದೂರು ಆಗ್ರಹ
* 'ಭಾರತ್ ಬಂದ್' ನಿಮಿತ್ತ ಕೃಷಿ ಪರಿಕರ ಮಾರಾಟಗಾರರ ಪ್ರತಿಭಟನೆ
ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಅಗ್ರಿ ಡೀಲರ್ಸ್ ಅಸೋಸಿಯೇಷನ್ ಒಂದು ದಿನದ 'ಭಾರತ ಬಂದ್'ಗೆ ಕರೆ ಕೊಟ್ಟಿದೆ. ಅದಕ್ಕೆ ಬೆಂಬಲಾರ್ಥವಾಗಿ ನಮ್ಮ ಕರ್ನಾಟಕ ರಾಜ್ಯ ಕೃಷಿ ಪರಿಕರ ಮಾರಾಟಗಾರರ ಸಂಘವೂ ಸಹ ರಾಜ್ಯಾದ್ಯಂತ ಏ. 27 ರಂದು ಬಂದ್ ಆಚರಿಸುತ್ತಿದೆ. ಉಡುಪಿ ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರೂ ಸಹ ತಮ್ಮ ಅಂಗಡಿಗಳನ್ನು ಮುಚ್ಚಿ, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ನಮ್ಮ ಸಂಘಟನೆಯ ಬೇಡಿಕೆ ಈಡೇರಿಸಬೇಕು ಎಂದು ಉಡುಪಿ ಜಿಲ್ಲಾ ಅಗ್ರಿ ಇನ್ಪುಟ್ ಡೀಲರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಶಿವಾನಂದ್ ಪ್ರಭು ಬೈಂದೂರು ತಿಳಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ (ಏ.27) 'ಭಾರತ್ ಬಂದ್' ಹಿನ್ನೆಲೆಯಲ್ಲಿ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಸೇರಿ ಮೌನ ಪ್ರತಿಭಟನೆ ನಡೆಸಿದರು.
ಆ್ಯಪ್, ಸಾಫ್ಟ್ ವೇರ್ ವ್ಯವಸ್ಥೆ
ಕೃಷಿ ಭೂಮಿ ಹಾಗೂ ಬೆಳೆಯ ಅನುಗುಣವಾಗಿ ಉಡುಪಿಯು ಸಣ್ಣ ಜಿಲ್ಲೆಯಾಗಿದೆ. ಹೀಗಾಗಿ ಇಲ್ಲಿನ ಬಹುತೇಕ ಕೃಷಿಕರೂ ಸಹ ಸಣ್ಣ ಪ್ರಮಾಣದಲ್ಲಿಯೇ ಕೃಷಿ ಮಾಡುವುದರಿಂದ ಚಿಲ್ಲರೆ ಗೊಬ್ಬರ ಮಾರಾಟವೇ ಹೆಚ್ಚು ನಡೆಯುತ್ತದೆ. ಅದಕ್ಕನುಗುಣವಾಗಿ ಆ್ಯಪ್, ಸಾಫ್ಟ್ ವೇರ್ ವ್ಯವಸ್ಥೆ ಮಾಡಿಕೊಡಬೇಕು. ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ, ಖರೀದಿಯ ಹೊಸ ಕಾನೂನಿನ ಕುರಿತು ಮಾಹಿತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಬರುವ ಹೊಸ ನಿಯಮ ಪಾಲನೆ ಮಾಡಲು ಮಾರಾಟಗಾರರಿಗೆ ಅಡಚಣೆ ಬಾರದಂತೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ತಮ್ಮ ಎಲ್ಲ ಬೇಡಿಕೆಯನ್ನೂ ರಾಜ್ಯ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘಟನೆಯ ಕಾರ್ಯದರ್ಶಿ ರಾಜೀವ ಶೆಟ್ಟಿ ಶಿರಿಯಾರ, ಗೌರವಾಧ್ಯಕ್ಷ ವೈ. ಗಣಪತಿ ಕಾಮತ್, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ ಜೆ.ಸಿ., ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ಹಾಗೂ ಉಡುಪಿ ಜಿಲ್ಲೆಯ ಕೃಷಿ ಪರಿಕರಗಳ ಎಲ್ಲ ಮಾರಾಟಗಾರರು ಉಪಸ್ಥಿತರಿದ್ದರು.
ಹತ್ತು ಪ್ರಮುಖ ಬೇಡಿಕೆಗಳು
ಡಿಎಪಿ ಮತ್ತು ಯೂರಿಯ ಗೊಬ್ಬರದೊಂದಿಗೆ ನ್ಯಾನೊ ಕಾಂಪ್ಲೆಕ್ಸ್ ಗೊಬ್ಬರ ಮತ್ತು ಇನ್ನಿತರ ಉತ್ಪಾದನೆ ಮಿಶ್ರಣ ಮಾಡಬಾರದು. ಇತ್ತೀಚೆಗೆ ಹಣದುಬ್ಬರದಿಂದ ಸಂಬಳ, ಹಮಾಲಿ ಖರ್ಚು, ಬಾಡಿಗೆ ಎಲ್ಲವೂ ಗಗನಮುಖಿಯಾಗಿದ್ದರಿಂದ ಎಲ್ಲ ರಸಗೊಬ್ಬರಗಳ ಎಂಆರ್ಪಿ ಮೇಲೆ ಕನಿಷ್ಠ ಶೇ.8 ಡೀಲರ್ ಲಾಭಾಂಶ ನೀಡಬೇಕು. ಎಲ್ಲ ರಸಗೊಬ್ಬರಗಳನ್ನು ಎ್ಒಎಲ್ ಕೊಡುವಂತೆ ಕ್ರಮವಾಗಬೇಕು. ಗೊಬ್ಬರ, ಬೀಜ, ಕೀಟನಾಶಕಗಳು ಕಳಪೆ ಬಂದಾಗ ಕಂಪನಿಯವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಬೇಕು. ಅಧಿಕಾರಿಗಳು ತಪಾಸಣೆಗಾಗಿ ನಮ್ಮ ಅಂಗಡಿ ಬಂದು ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ 'ದಾಳಿ' ಎಂಬ ಶಬ್ದ ಮತ್ತು ನಮ್ಮ ಅಂಗಡಿಯ ಫೋಟೋ ಬಳಸಬಾರದು. ಎಫ್ಐಡಿ ಆದೇಶ ಸ್ವಾಗತಿಸುತ್ತೇವೆ. ಆದರೆ, ನೀರಾವರಿ ಮತ್ತು ಒಣ ಬೇಸಾಯಗಾರರಿಗೆ ಬೆಳೆಗಳ ಆಧಾರದಲ್ಲಿ ರಸಗೊಬ್ಬರ ಲಭಿಸಬೇಕು. ಮಾರಾಟಗಾರರಿಗೆ ವ್ಯವಹಾರ ಸುಲಭವಾಗಲು ಎಫ್ಐಡಿ ಮತ್ತು ಡಿಬಿಟಿ ಇವೆರಡೂ ತಂತ್ರಾಂಶ ಒಂದೇ ಆ್ಯಪ್ನಲ್ಲಿರಬೇಕು.