ಉಡುಪಿ ಜಿಲ್ಲಾಸ್ಪತ್ರೆ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕರವೇ ಕಾರ್ಯಕರ್ತರಿಗೆ ಎಡಿಸಿ ಅಬೀದ್​ ಗದ್ಯಾಳ ತಂಪು ಪಾನೀಯ ನೀಡಿದರು.  
ಉಡುಪಿ

ಉಡುಪಿ ಜಿಲ್ಲಾಡಳಿತದ ಭರವಸೆ; ಕರವೇ ಪ್ರತಿಭಟನೆ ಅಂತ್ಯ

* ಕಾರ್ಯಕರ್ತರಿಗೆ ತಂಪು ಪಾನೀಯ ನೀಡಿದ ಎಡಿಸಿ ಅಬೀದ್​

* ನ.5ರೊಳಗೆ ಚಿಕಿತ್ಸೆ ಆರಂಭಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ಎಚ್ಚರಿಕೆ

ಉಡುಪಿ: ಉಡುಪಿಯ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನೆಗೊಳಿಸಿ ಬಡವರಿಗೆ ಹಾಗೂ ಅಗತ್ಯ ಇರುವವರಿಗೆ ಚಿಕಿತ್ಸೆ ಕೊಡಿ ಎಂಬ ಬೇಡಿಕೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ. ಐದನೇ ದಿನವಾದ ಸೋಮವಾರ ಜಿಲ್ಲಾಡಳಿತದ ಭರವಸೆ ಹಿನ್ನೆಯಲ್ಲಿ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.

ಉಡುಪಿಯ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್​ ಹುಬ್ಬಳ್ಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನೂತನ ಜಿಲ್ಲಾಸ್ಪತ್ರೆಗೆ ಯಂತ್ರೋಪಕರಣಗಳ ಅಳವಡಿಕೆ ಕಾರ್ಯವನ್ನು ನಾಳೆಯಿಂದಲೇ ಆರಂಭಿಸುವುದಾಗಿ ತಿಳಿಸಿದರು. ಅಲ್ಲದೆ, ನ.5ರೊಳಗೆ ಚಿಕಿತ್ಸೆ ಆರಂಭಿಸುವ ಭರವಸೆಯನ್ನೂ ನೀಡಿದರು.

ತಂಪು ಪಾನೀಯ ನೀಡಿದ ಎಡಿಸಿ

ತಾವುಗಳು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಬೇಕೆಂದು ತಿಳಿಸಿದ ಎಡಿಸಿ ಅಬೀದ್​ ಗದ್ಯಾಳ್​, ತಂಪು ಪಾನೀಯವನ್ನು ಪ್ರತಿಭಟನಾ ನಿರತರಿಗೆ ಕುಡಿಸಿದರು. ಬಳಿಕ ಕರವೇ ಕಾರ್ಯಕರ್ತರು ಪ್ರತಿಭಟನೆ ಮುಕ್ತಾಯಗೊಳಿಸಿದರು.

ರಾಜ್ಯ ಸಂಚಾಲಕ ಪ್ರಸನ್ನಕುಮಾರ್​ ಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್​ ಅಹಮ್ಮದ್​, ಜಿಲ್ಲಾಧ್ಯಕ್ಷ ಸುಧೀರ್​ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷೆ ದೇವಕಿ ಬಾರ್ಕೂರು, ಜಿಲ್ಲಾ ಸಂಚಾಲಕ ಎಂ.ಎಸ್​. ಸೈಯದ್​ ನಿಜಾಮುದ್ದೀನ್​, ಉಪಾಧ್ಯಕ್ಷ ಅಲ್ಫಾನ್ಸೋ ಮೆನೇಜಸ್​ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಜಾಗಟೆ ಹಾಗೂ ಗಂಟೆ ಬಾರಿಸ ಮೂಲಕ ನಿದ್ದೆಯಲ್ಲಿರುವ ಸರ್ಕಾರವನ್ನು ಎಚ್ಚರಿಸುವ ಮೂಲಕ ಒಂದು ವಾರದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೆವು. 5ನೇ ದಿನ ಎಡಿಸಿ ಹಾಗೂ ಆರೋಗ್ಯಾಧಿಕಾರಿ ಬಂದು ನ.5ರೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆ ಸಮಯದೊಳಗೆ ಆಸ್ಪತ್ರೆ ಆರಂಭ ಆಗದಿದ್ದಲ್ಲಿ ನ.6ರಿಂದ ಮತ್ತೆ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ.
ಅನ್ಸಾರ್​ ಅಹಮ್ಮದ್​. ಕರವೇ ಜಿಲ್ಲಾ ಗೌರವಾಧ್ಯಕ್ಷ.