ಉಡುಪಿಯ ಶೋಕಮಾತಾ ಚರ್ಚ್ನಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕ್ರೈಸ್ತ ಐಕ್ಯತಾ ಸಪ್ತಾಹದ ಪ್ರಾರ್ಥನಾ ಸಭೆ ನಡೆಯಿತು. ವೀರೇಶ್ ಮೋರಾಸ್, ಡಾ.ಜೆರಾಲ್ಡ್ ಐಸಾಕ್ ಲೋಬೊ, ಡೆನಿಸ್ ಡೆಸಾ, ಸ್ಟೀಫನ್ ಡಿಸೋಜಾ, ಚಾರ್ಲ್ಸ್ ಮಿನೇಜಸ್, ಕಿಶೋರ್, ಸಂತೋಷ್ ಇದ್ದರು.
* ವೀರೇಶ್ ಮೋರಾಸ್ ಅಭಿಪ್ರಾಯ
* ಕ್ರೈಸ್ತ ಐಕ್ಯತಾ ಸಪ್ತಾಹದ ಪ್ರಾರ್ಥನಾ ಸಭೆ
ಉಡುಪಿ: ಭಾರತ ದೇಶವು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕವಿಗಳು ಹಾಡಿ ಹೊಗಳಿದ್ದಾರೆ. ಅದರಂತೆ ಬಾಳಬೇಕಾದರೆ ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ನಮ್ಮ ವೈಯುಕ್ತಿಕ ಸಿದ್ಧಾಂತಗಳನ್ನೆಲ್ಲ ಬಿಟ್ಟು ಎಲ್ಲರೂ ನಮ್ಮವರು ಎಂಬ ಭಾವನೆ ಅಳವಡಿಸಿಕೊಂಡಾಗ ದೇಶದಲ್ಲಿ ಐಕ್ಯತೆ ಕಾಣಲು ಸಾಧ್ಯ. ದೇಶದಲ್ಲಿರುವ ಸಮಸ್ಯೆಗಳಿಗೆ ವಿವಿಧ ಕೆಸ್ತ ಸಭೆಗಳು ಒಂದಾಗಿ ದನಿ ಎತ್ತುವ ಕಾರ್ಯ ಮಾಡಬೇಕು ಎಂದು ತೀರ್ಥಹಳ್ಳಿ ಚರ್ಚ್ನ ಧರ್ಮಗುರು ವಂ.ವೀರೇಶ್ ಮೋರಾಸ್ ಅಭಿಪ್ರಾಯಪಟ್ಟರು.
ಉಡುಪಿಯ ಶೋಕಮಾತಾ ಚರ್ಚ್ನಲ್ಲಿ ಸೋಮವಾರ (ಜ.19) ಸಂಜೆ ಆಯೋಜಿಸಿದ್ದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕ್ರೈಸ್ತ ಐಕ್ಯತಾ ಸಪ್ತಾಹದ ಪ್ರಾರ್ಥನಾ ಸಭೆಯಲ್ಲಿ ಸಂದೇಶ ನೀಡಿದರು.
ಭಿನ್ನಾಭಿಪ್ರಾಯ ಮರೆಯೋಣ
ಸಭೆಯ ನೇತೃತ್ವ ವಹಿಸಿದ್ದ ಉಡುಪಿಯ ಕಥೊಲಿಕ್ ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಪರರ ಕಷ್ಟ-ಸಂಕಷ್ಟಗಳಿಗೆ ನಾವು ಸ್ಪಂದಿಸಿ ಐಕ್ಯತಾ ಮನೋಭಾವ ವೃದ್ಧಿಗೊಳಿಸಬೇಕು. ಪರರ ನೋವಿಗೆ ದನಿಯಾದಾಗ ಅವರಲ್ಲಿ ಪರಮಾತ್ಮನನ್ನು ಕಾಣಲು ಸಾಧ್ಯವಿದೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆತು ಜತೆಯಾಗಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಸಿಎಸ್ಐ ಸದರ್ನ್ ಡಯಾಸಿಸ್ ಧಮಾರ್ಧ್ಯಕ್ಷ ವಂ. ಹೇಮಚಂದ್ರಕುಮಾರ್ ಮಾತನಾಡಿ, ಐಕ್ಯತಾ ಸಪ್ತಾಹವು ಕ್ರೈಸ್ತ ಸಭೆಗಳನ್ನು ಬಲಗೊಳಿಸಲು ಸಹಕಾರಿಯಾಗಲಿ. ತನ್ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಲಿ ಎಂದರು.
ಪ್ರಾರ್ಥನಾ ವಿಧಿಯಲ್ಲಿ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ, ಧರ್ಮಪ್ರಾಂತ್ಯದ ಕುಲಪತಿ ವಂ.ಸ್ಟೀಫನ್ ಡಿಸೋಜಾ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಸಿಎಸ್ಐ ಸಭೆಯ ವಂ. ಕಿಶೋರ್, ವಂ.ಸಂತೋಷ್, ರೋಮನ್ ಕೆಥೊಲಿಕ್, ಸಿಎಸ್ಐ, ಸಿರೋಮಲಬಾರ್ ಸಹಿತ ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಯುನೈಟೆಡ್ ಕ್ರಿಶ್ಚಿಯನ್ ಫೋರಂನ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ ಸ್ವಾಗತಿಸಿದರು. ಉಡುಪಿ ಧರ್ಮಪ್ರಾಂತ್ಯದ ಕೆಸ್ತ ಐಕ್ಯತಾ ಆಯೋಗದ ನಿರ್ದೇಶಕ ವಂ.ಲಿಯೊ ಪ್ರವೀಣ್ ಡಿಸೋಜಾ ವಂದಿಸಿದರು.