ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರದೀಪ ಶೆಟ್ಟಿ ಮಾತನಾಡಿದರು. ಅಶ್ವತ್ಥ ದೇವಾಡಿಗ ಕಡಿಯಾಳಿ, ಶ್ರೇಯಸ್​ ದೇವಾಡಿಗ ಕಡಿಯಾಳಿ,ವಿಘ್ನೇಶ ಪ್ರಭು, ವಿವೇಕ ಕಾಮತ ಉಪಸ್ಥಿತರಿದ್ದರು. 
ಉಡುಪಿ

ಅ.17ರಂದು 'ಉಡುಪಿ ದಾಂಡಿಯಾ' ಸ್ಫರ್ಧೆ

* ಯುವ ಘಟಕ ಸಮಿತಿಯ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾಹಿತಿ

* ಭಾರತ ಮಹಿಳಾ ಕಬಡ್ಡಿ ತಂಡದ ಧನಲಕ್ಷ್ಮೀ ಉದ್ಘಾಟನೆ

ಉಡುಪಿ: ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.)ಯ ಯುವ ಘಟಕದ ನೇತೃತ್ವದಲ್ಲಿ ಅ.17ರಂದು ಸಂಜೆ 6 ಗಂಟೆಗೆ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ 9ನೇ ವರ್ಷದ 'ಉಡುಪಿ ದಾಂಡಿಯಾ&2026' ಸ್ಫರ್ಧೆ ಆಯೋಜಿಸಲಾಗಿದೆ. 2025ರ ವಿಶ್ವ ಚಾಂಪಿಯನ್​ ಭಾರತದ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿಯಾಗಿದ್ದ ಧನಲಕ್ಷ್ಮೀ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಯವ ಘಟಕ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾಹಿತಿ ನೀಡಿದರು.

ಉಡುಪಿಯ ಪತ್ರಿಕಾ ಭವನದಲ್ಲಿ ಸೋಮವಾರ (ಅ.12) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಕನ್ನಡ ಚಿತ್ರನಟಿ ರೂಪಶ್ರೀ ವರ್ಕಾಡಿ, ಭರತನಾಟ್ಯದಲ್ಲಿ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ ಮಾಡಿರುವ ವಿದುಷಿ ದೀಕ್ಷಾ ಹಾಗೂ ತುಳು ಚಲನಚಿತ್ರದ ಅನೇಕ ನಟರು ಪಾಲ್ಗೊಳ್ಳಲಿದ್ದಾರೆ ಎಂದರು.

ವಿವಿಧ ಸ್ಪರ್ಧೆ

ಸ್ಪರ್ಧೆಯಲ್ಲಿ ಅತ್ಯುತ್ತಮ ಜೋಡಿ ನೃತ್ಯ, ಅತ್ಯುತ್ತಮ ವೇಷ-ಭೂಷಣ, ಅತ್ಯುತ್ತಮ ಸಮೂಹ ನೃತ್ಯ, 1ರಿಂದ 10 ವರ್ಷದೊಳಗಿನ ಮಕ್ಕಳ ಅತ್ಯುತ್ತಮ ವೇಷ-ಭೂಷಣ ಸ್ಪರ್ಧೆ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಅತ್ಯುತ್ತಮ ನವವಿವಾಹಿತ ಜೋಡಿ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. 2026 ಅ.17ರ ವೇಳೆಗೆ ಮೊದಲ ವಿವಾಹ ವಾರ್ಷಿಕೋತ್ಸವ ಪೂರ್ಣಗೊಳಿಸದ ದಂಪತಿಗೆ ಮಾತ್ರ ಈ ವಿಭಾಗದಲ್ಲಿ ಅವಕಾಶವಿದೆ. ಎಲ್ಲ ವಿಭಾಗದ ನೃತ್ಯ ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದರು.

ಉಚಿತ ಪ್ರವೇಶ

ಯುವ ಘಟಕದ ಗೌರವಾಧ್ಯಕ್ಷ ಅಶ್ವತ್ಥ ದೇವಾಡಿಗ ಕಡಿಯಾಳಿ ಮಾತನಾಡಿ, ಕಾರ್ಯಕ್ರಮದ ಮೈದಾನವನ್ನು ವಿಶಿಷ್ಟ ರೀತಿಯ ಅಲಂಕಾರ ಮಾಡಲಾಗುತ್ತಿದೆ. ವಿವಿಧ ಆಹಾರ ಮಳಿಗೆಗಳೂ ಇರಲಿದೆ. ನವರಾತ್ರಿ ನಿಮಿತ್ತ ಸುಡುಮದ್ದು ವಿಶೇಷ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ಮತ್ತು ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಹಾಗೂ ವೀಕ್ಷಣೆ ಬರುವವರಿಗೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತರಿರುವವರು ನೇರವಾಗಿ ಸ್ಥಳಕ್ಕೆ ಬಂದು ನೋಂದಣಿ ಮಾಡಿಕೊಳ್ಳಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೇಯಸ್​ ದೇವಾಡಿಗ ಕಡಿಯಾಳಿ, ಕೋಶಾಧಿಕಾರಿ ವಿಘ್ನೇಶ ಪ್ರಭು, ವಿವೇಕ ಕಾಮತ ಉಪಸ್ಥಿತರಿದ್ದರು.