ನಗರದಾದ್ಯಂತ ಎಲ್ಲಾ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್​ ಮಾಡಲಾಗಿದೆ.  
ಉಡುಪಿ

ಪ್ರವಾಸಿಗರ ವಾಹನಗಳಿಂದ ತುಂಬಿದ ಉಡುಪಿ ನಗರ

ಉಡುಪಿ: ಕ್ರಿಸ್ಮಸ್​ ರಜೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಪ್ರವಾಸಿಗರ ದಂಡು ಹರಿದು ಬಂದಿದ್ದು, ನಗರದಾದ್ಯಂತ ಎಲ್ಲಾ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್​ ಮಾಡಲಾಗಿದೆ. ಇದರಿಂದ ಸ್ಥಳಿಯರು ಒಂದಡೆಯಿಂದ ಇನ್ನೊಂದೆಡೆ ಸಂಚರಿಸಲು ಪರದಾಡುವಂತಾಗಿದೆ.

ರಾಜಾಂಗಣ ಪಾರ್ಕಿಂಗ್​ ಸ್ಥಳ ಭರ್ತಿಯಾಗಿದ್ದು, ಅಗಲ ಕಿರಿದಾದ ವಾದಿರಾಜ ರಸ್ತೆಯಲ್ಲೇ ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಿದ್ಯೋದಯ ಶಾಲೆ, ಅನಂತೇಶ್ವರ ಶಾಲೆ, ಒಳಕಾಡು ಶಾಲೆ, ಪೂರ್ಣಪ್ರಜ್ಞ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಾಲೆಯ ಮಕ್ಕಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿ ನೋ ಪಾರ್ಕಿಂಗ್​ ಲಕ ಅಳವಡಿಸದೇ ಇರುವುದರಿಂದ ಪ್ರಶ್ನಿಸಲು ಬರುವ ಸ್ಥಳಿಯರೊಂದಿಗೆ ವಾಹನ ಚಾಲಕರು ಜಗಳಕ್ಕೆ ನಿಲ್ಲುತ್ತಿದ್ದಾರೆ. ಈ ಬಗ್ಗೆ ಪೊಲೀಸ್​ ಇಲಾಖೆ ಸೂಕ್ತ ಕ್ರಮವಹಿಸಬೇಕಾಗಿದೆ.

ಬೈಲಕೆರೆಯಲ್ಲಿ ನೋ ಪಾರ್ಕಿಂಗ್​
ಈ ಹಿಂದೆ ರಾಜಾಂಗಣ ಪಾರ್ಕಿಂಗ್​ ಪ್ರದೇಶ ತುಂಬಿದ ಮೇಲೆ ಸಮೀಪದಲ್ಲಿರುವ ಬೈಲಕೆರೆ ಖಾಸಗಿ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಆದರೆ ಪ್ರವಾಸಿಗರ ಬೇಕಾಬಿಟ್ಟಿ ಕಸಗಳನ್ನು ಎಸೆದು ತೊಂದರೆ ಮಾಡುತ್ತಿದ್ದ ಕಾರಣ ಜಾಗಕ್ಕೆ ಸಂಬಂಧಪಟ್ಟವರು ಬೇಲಿಹಾಕಿ ಬಂದ್​ ಮಾಡಿದ್ದಾರೆ. ನಗರಸಭೆ ಹಾಗೂ ಕೃಷ್ಣ ಮಠದ ಆಡಳಿತವರ್ಗ ಜಾಗದ ಮಾಲೀಕರೊಂದಿಗೆ ಚರ್ಚಿಸಿ ಶುಲ್ಕ ಪಾವತಿ ಆಧಾರದಲ್ಲಿ ಪಾರ್ಕಿಂಗ್​ಗೆ ಅವಕಾಶ ಕಲ್ಪಿಸಿದರೆ ಕೃಷ್ಣ ಮಠದ ಆಸುಪಾಸಿನಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್​ ಸಮಸ್ಯೆ ಇತ್ಯರ್ಥವಾಗಬಹುದು. ಆದರೆ ಬೆಕ್ಕಿಗೆ ಗಂಟೆಕಟ್ಟುವವರ್ಯಾರು ಎಂಬುದೇ ಪ್ರಶ್ನೆಯಾಗಿದೆ.

ಓಣಿ ರಸ್ತೆಗಳಲ್ಲೂ ಪಾರ್ಕಿಂಗ್​
ಕನಕದಾಸ ರಸ್ತೆ, ವಿದ್ಯಾಸಮುದ್ರ ರಸ್ತೆ, ವಾದಿರಾಜ ರಸ್ತೆ ಸಹಿತ ಕೃಷ್ಣ ಮಠಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ವಾಹನಗಳನ್ನು ಪಾರ್ಕ್​ ಮಾಡಲಾಗುತ್ತಿದೆ. ಬಹಳ ಹೊತ್ತು ವಾಹನಗಳನ್ನು ತೆಗೆಯದೇ ಇರುವುದರಿಂದ ಸ್ಥಳಿಯರಿಗೆ ವಾಹನ ಪಾರ್ಕ್​ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸ್ಥಳಿಯ ವ್ಯಾಪಾರಿಗಳಿಗೂ ತೊಂದರೆಯಾಗುತ್ತಿದೆ.
"

ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಟ್ರಾಫಿಕ್​ ನಿಯಂತ್ರಣಕ್ಕೆ ಸಂಚಾರಿ ಠಾಣೆ ಪೊಲೀಸರೊಂದಿಗೆ ಹೆಚ್ಚ್ಚುವರಿಯಾಗಿ 10 ಮಂದಿ ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ. ಅಗಲ ಕಿರಿದಾದ ಸಂಪರ್ಕ ರಸ್ತೆಗಳಲ್ಲಿ ಪ್ರವಾಸಿಗರು ವಾಹನ ಪಾರ್ಕಿಂಗ್​ ಮಾಡದಂತೆ ಕ್ರಮವಹಿಸಲಾಗುವುದು.