ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಪಂ ವ್ಯಾಪ್ತಿಯ ಕೊರಗರ ಕಾಲನಿಯಲ್ಲಿ ನಿರ್ಮಾಣಗೊಂಡ ನೂತನ ಸಭಾಭವನವನ್ನು ಕೋಟ ಶ್ರೀನಿವಾಸ ಪೂಜಾರಿ ಪರಿಶೀಲಿಸಿದರು. ಕಿರಣಕುಮಾರ್ ಕೊಡ್ಗಿ, ಚಂದ್ರಶೇಖರ್ ಶೆಟ್ಟಿ, ಕಲಾವತಿ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ಸದಾನಂದ್ ಪೂಜಾರಿ, ದೀಪಿಕಾ ಶೆಟ್ಟಿ, ಸತೀಶ್ ಶೆಟ್ಟಿ ಇತರರಿದ್ದರು.
* ಉಡುಪಿ ಸಂಸದ ಕೋಟ ಪೂಜಾರಿ ಮಾಹಿತಿ
* 17 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿ
ಉಡುಪಿ: ಜಿಲ್ಲೆಗೆ ಕೇಂದ್ರ ಸರ್ಕಾರದ ಬುಡಕಟ್ಟು ಇಲಾಖೆಯಿಂದ 18 ವಿವಿಧೋದ್ದೇಶ ಸಭಾಭವನಕ್ಕೆ 10.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೊರಗರ ಕಾಲನಿಗೆ ಶಾಸಕ ಕಿರಕುಮಾರ್ ಕೊಡ್ಗಿ ಅವರೊಂದಿಗೆ ಮಂಗಳವಾರ (ಜೂ.9) ಭೇಟಿ ನೀಡಿ ನೂತನ ಸಭಾಭವನ ಪರಿಶೀಲಿಸಿ ಮಾತನಾಡಿದರು.
17 ಕಟ್ಟಡದ ಕಾಮಗಾರಿ
ಕೊರಗರ ವಿವಿಧೋದ್ದೇಶ ಕಟ್ಟಡವು ತಲಾ 60 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿದೆ. 17 ಕಟ್ಟಡಗಳು ಪ್ರಗತಿಯಲ್ಲಿದ್ದು ಕಾರ್ಕಳದಲ್ಲಿ ಒಂದು ಕಟ್ಟಡಕ್ಕೆ ನಿವೇಶನ ಒದಗಿಸಬೇಕಾಗಿದೆ. ಕೇಂದ್ರ ಸರ್ಕಾರ ಬಡವರಿಗಾಗಿ ನೀಡಿರುವ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಶಾಸಕ ಕಿರಣಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಬಂದಿರುವುದು ಸಂತಸದ ವಿಚಾರ. ಕೇಂದ್ರ ಸರ್ಕಾರಕ್ಕೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಮಾಜಿ ಉಪಾಧ್ಯಕ್ಷೆ ಕಲಾವತಿ ಆಚಾರ್ಯ, ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ, ತಾಪಂ ಮಾಜಿ ಸದಸ್ಯರಾದ ಸದಾನಂದ್ ಪೂಜಾರಿ, ದೀಪಿಕಾ ಶೆಟ್ಟಿ, ಸತೀಶ್ ಶೆಟ್ಟಿ, ಪ್ರಮುಖರಾದ ವಿಜಯಕುಮಾರ್ ಶೆಟ್ಟಿ ಗೊಳಿಯಂಗಡಿ, ಸಂತೋಷ್ ಪೂಜಾರಿ, ಕೃಷ್ಣ ನಾಯ್ಕ್, ರಾಜೇಶ್, ಮದನಮೋಹನ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಷಾ ಪ್ರಕಾಶ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.