ದೆಹಲಿಯಲ್ಲಿ ಖ್ಯಾತ ಹೋಟೆಲ್ ಉದ್ಯಮಿ ಜಯರಾಮ್ ಬನಾನ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರದ ಹಾಗೂ ಪ್ರಧಾನಿ ಮೋದಿ ಸಾಧನೆಯ ಮಾಹಿತಿ ಇರುವ ಪುಸ್ತಕ ವಿತರಿಸಿದರು. ಸತೀಶ್ ಕುಂಪಲ ಹಾಗೂ ಇನ್ನಿತರರು ಇದ್ದರು.
* ಖ್ಯಾತ ಹೋಟೆಲ್ ಉದ್ಯಮಿ ಜಯರಾಮ್ ಬನಾನ ಅಭಿಪ್ರಾಯ
* ಸಂಸದ ಪೂಜಾರಿಯಿಂದ ಕೇಂದ್ರದ ಸಾಧನೆಯ ಪುಸ್ತಕ ಸ್ವೀಕಾರ
ಉಡುಪಿ: ಭಾರತ ದೇಶದ ಸಮಗ್ರತೆ ಹಾಗೂ ಅಖಂಡತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಮಾತ್ರವಲ್ಲ, ಸರ್ವರೂ ಬೆಂಬಲಿಸಬೇಕು. ದೇಶವನ್ನು ಅವರು ಮುನ್ನಡೆಸುವ ರೀತಿ ವಿಶ್ವದ ವಿವಿಧ ದೇಶಗಳ ನಾಯಕರ ಗಮನ ಸೆಳೆಯುತ್ತಿದೆ. ಮೋದಿ ಎಂದರೆ ಭಾರತ ದೇಶದ ಬೆಳಕು ಎಂದು ಖ್ಯಾತ ಹೋಟೆಲ್ ಉದ್ಯಮಿ ಜಯರಾಮ್ ಬನಾನ ಅಭಿಪ್ರಾಯಪಟ್ಟರು.
ದೆಹಲಿಯಲ್ಲಿರುವ 'ಸಾಗರ ರತ್ನ' ಹೋಟೆಲ್ಗೆ ಆಗಮಿಸಿದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ 'ಮೋದಿ ಸಾಧನೆಗಳನ್ನೊಳಗೊಂಡ ಮಾಹಿತಿ ಪುಸ್ತಕ' ಸ್ವೀಕರಿಸಿ ಮಾತನಾಡಿದರು.
ಬಾಲಕನ ಸಾಹಸ ಕುತೂಹಲಕಾರಿ
ಸಂಸದ ಕೋಟ ಪೂಜಾರಿ ಮಾತನಾಡಿ, ಕಾರ್ಕಳ ತಾಲೂಕಿನ ಜೋಡುಕಟ್ಟೆ ಸಮೀಪದ ಮಿಯ್ಯಾರು ಎಂಬ ಪುಟ್ಟ ಗ್ರಾಮದಿಂದ ಕೇವಲ 13 ವರ್ಷದ ಬಾಲಕನಾಗಿದ್ದ ಜಯರಾಮ್ ಅಂದು ದಿಕ್ಕುದೆಸೆಯಿಲ್ಲದೆ ಹೊರಟರು. ಅಲೆಮಾರಿಯಂತೆ ತಿರುಗಿ ಸ್ವಯಂ ಶ್ರಮದಿಂದ ಕಟ್ಟಿದ ಹೋಟೆಲ್ ಉದ್ಯಮ ಇದೀಗ ಜಗತ್ತನ್ನೇ ಬೆರಗುಗೊಳಿಸಿದೆ. ಹೊಟೇಲ್ ಸ್ವಾಗತ, ಸಾಗರ ರತ್ನ, ಶ್ರೀರತ್ನ, ಓಷಿಯನ್ ಪರ್ಲ್ ಸಹಿತ ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ಹೊಟೇಲ್ ಹೊಂದಿರುವುದು ಅವರ ಸಾಧನೆಯಾಗಿದೆ ಎಂದರು.
ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಬದುಕಿನಲ್ಲಿ ಪರಿಶ್ರಮ ಪಟ್ಟರೆ ಯಾವ ಮಟ್ಟ ತಲುಪಬಹುದು ಎನ್ನುವುದಕ್ಕೆ ಜಯರಾಮ್ ಅವರು ಸಮಾಜಕ್ಕೊಂದು ಸಾಕ್ಷಿಯಾಗಿದ್ದಾರೆ. 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಆಸರೆಯಾಗಿದ್ದಾರೆ. ಅವರು ನಡೆದು ಬಂದ ದಾರಿ, ಪಟ್ಟ ಶ್ರಮ, ಕಟ್ಟಿದ ಹೋಟೆಲ್ ಉದ್ಯಮದ ಸಾಮ್ರಾಜ್ಯ ನಿಜಕ್ಕೂ ಕುತೂಹಲಕಾರಿ ಎಂದು ಸಂಸದ ಕೋಟ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹಾಗೂ ಇನ್ನಿತರರು ಇದ್ದರು.