ಕಥೊಲಿಕ್​ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ನಡೆಯಿತು.  
ಉಡುಪಿ

ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯ ಪರಮ ಪ್ರಸಾದದ ಮೆರವಣಿಗೆ

ಗೋಪಾಲಕೃಷ್ಣ ಪಾದೂರ್
ಉಡುಪಿ: ಕಥೊಲಿಕ್​ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್​ ಕ್ಯಾಥೆಡ್ರಲ್​ನಲ್ಲಿ ಜರಗಿತು.

ಬಿಷಪ್​ ಡಾ. ಜೆರಾಲ್ಡ್​ ಐಸಾಕ್​ ಲೋಬೊ ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದರು. ಧರ್ಮಗುರು ವಿಲ್ಸನ್​ ಡಿಸೋಜ ಪರಮ ಪ್ರಸಾದ ಆರಾಧನೆ ನೆರವೇರಿಸಿದರು. ಬಳಿಕ ಪರಮ ಪ್ರಸಾದವನ್ನು ವಿಶೇಷವಾಗಿ ಅಲಂಕರಿಸಿದ, ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಒಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್​ ರೋಸರಿ ಚರ್ಚ್ನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು. ಬ್ಯಾಂಡ್​- ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ ಮೆರವಣಿಗೆ ನಡೆಯಿತು.
ಮೌಂಟ್​ ರೋಜರಿ ದೈವಾಲಯದ ಸಭಾಂಗಣದಲ್ಲಿ ದೈವವಾಕ್ಯದ ಪ್ರಬೋಧನೆಯನ್ನು ಮಿಲಾಗ್ರಿಸ್​ ಕಾಥೆಡ್ರಲ್​ ಸಹಾಯಕ ಗುರು ವಂದನೀಯ ಫಾ. ಪ್ರದಿಪ್​ ಕಾಡೋರ್ಜ ರವರು ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್​ ಜನರಲ್​ ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​, ಕುಲಪತಿ ಸ್ಟೀಫನ್​ ಡಿಸೋಜಾ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ಡಾಣಲೆಸ್ಲಿ ಡಿಸೋಜ, ಆಲ್ಬನ್​ ಡಿಸೋಜಾ, ಚಾರ್ಲ್ಸ್​ ಮಿನೇಜಸ್​, ಧರ್ಮಪ್ರಾಂತ್ಯದ ಪಾಲನಾ ಸಮಿತಿ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.
ಧರ್ಮಪ್ರಾಂತ್ಯದ ಬೈಬಲ್​ ಆಯೋಗದ ನಿರ್ದೇಶಕ ವಿಲ್ಸನ್​ ಡಿಸೋಜ ಮತ್ತು ಸಂತೆಕಟ್ಟೆ ಮೌಂಟ್​ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ಡಾ. ರೋಕ್​ ಡಿಸೋಜ ದೈವಾರಾಧನಾ ವಿಧಿಯನ್ನು ಸಮರ್ಪಕವಾಗಿ ನಿರೂಪಿಸಿದರು. ರೊನಾಲ್ಡ್​ ಸಲ್ಡಾನಾ ವಂದಿಸಿದರು.
ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚ್ಗಳಿಂದ ಸುಮಾರು 3000ಕ್ಕೂ ಅಧಿಕ ಭಕ್ತರು, 60ಕ್ಕೂ ಅಧಿಕ ಧರ್ಮ ಗುರುಗಳು, 100ಕ್ಕೂ ಅಧಿಕ ಧರ್ಮ ಭಗಿನಿಯರು ಭಾಗವಹಿಸಿದ್ದರು.
"

ಪ್ರೀತಿ ಮತ್ತು ಸೇವೆ ಧರ್ಮದ ಮೂಲ ತತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು. ಮುಂದಿನ ವರ್ಷವನ್ನು ಉಡುಪಿ ಧರ್ಮಪ್ರಾಂತ್ಯದಲ್ಲಿ ಬಡವರ ವರ್ಷವಾಗಿ ಆಚರಿಸಲಾಗುತ್ತಿದ್ದು, ಕಷ್ಟದಲ್ಲಿರುವವರಿಗೆ, ಬಡತನದ ನೋವಿನಲ್ಲಿರುವವರಿಗೆ ಸಹಾಯಹಸ್ತ ಚಾಚಲು ಪ್ರತಿಯೊಬ್ಬರು ಪಣತೊಡಬೇಕು.

— ಡಾ. ಜೆರಾಲ್ಡ್​ ಐಸಾಕ್​ ಲೋಬೊ, ಬಿಷಪ್​ , ಉಡುಪಿ