ಕಾಲಿನ ಮೂಳೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ರೋಗಿಗೆ 'ಲಿಂಬ್​ ಸಾಲ್ವೇಜ್​' ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಿದ ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ. ಜಿ.ಎಸ್​. ಚಂದ್ರಶೇಖರ್​, ಡಾ. ಅನಂತ್​ ಎಸ್​. ಮಠದ್​, ಡಾ. ನವನೀತ್​, ಡಾ. ಸುಖೇನ್​ ಶೆಟ್ಟಿ ಹಾಗೂ ನರ್ಸಿಂಗ್​ ಸಿಬ್ಬಂದಿ. 
ಉಡುಪಿ

ಯುವಕರಿಬ್ಬರ ಕಾಲುಗಳಿಗೆ ಮರುಜೀವ

* ಉಡುಪಿಯ ಆದರ್ಶ ಆಸ್ಪತ್ರೆ ವೈದ್ಯರ ಸಾಧನೆ

* ಯಶಸ್ವಿಯಾದ 'ಲಿಂಬ್​ ಸಾಲ್ವೇಜ್​' ಶಸ್ತ್ರಚಿಕಿತ್ಸೆ

ಉಡುಪಿ: ಕ್ಯಾನ್ಸರ್​ ಹೆಸರು ಕೇಳಿದರೆ ಜನರ ಎದೆಯಲ್ಲಿ ನಡುಕ ಹುಟ್ಟುತ್ತದೆ. ಅದರಲ್ಲೂ ಕೈ-ಕಾಲುಗಳ ಮೂಳೆ ಅಥವಾ ಮಾಂಸ ಖಂಡಗಳಲ್ಲಿ ಉಂಟಾಗುವ ಕ್ಯಾನ್ಸರ್​ ಗಡ್ದೆಗಳು ಅಂಗವೈಕಲ್ಯತೆಗೂ ಕಾರಣವಾಗುತ್ತವೆ. ಈ ಬಗೆಯ ರೋಗಕ್ಕೆ ತುತ್ತಾಗಿದ್ದ ಯುವಕರಿಬ್ಬರು ಮರುಜೀವ ಪಡೆದ ಯಶೋಗಾಥೆಯಿದು.
ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯರ ತಂಡವು ಯುವಕರಿಬ್ಬರ ಕಾಲಿನಲ್ಲಿ ಉಂಟಾಗಿದ್ದ ಕ್ಯಾನ್ಸರ್​ ಗಡ್ಡೆಯನ್ನು ಅತ್ಯಂತ ಸಂಕೀರ್ಣವಾದ ಎರಡು ಪ್ರಮುಖ 'ಲಿಂಬ್​ ಸಾಲ್ವೇಜ್​' (ಕಾಲನ್ನು ಉಳಿಸುವ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. 

ಪ್ರಥಮ ಪ್ರಕರಣ

ಮೊದಲ ಪ್ರಕರಣದಲ್ಲಿ 31 ವರ್ಷದ ಯುವಕನೊಬ್ಬ 'ರೈಟ್​ ಡಿಸ್ಟಲ್​ ಫೀಮರ್​ ಕೊಂಡ್ರೊಸಾರ್ಕೋಮಾ' ಎಂಬ ಮೂಳೆಯ ತೀವ್ರ ಕ್ಯಾನ್ಸರ್​ಗೆ ತುತ್ತಾಗಿದ್ದನು. ಆತನ ಮೊಣಕಾಲಿನ ಮೇಲ್ಭಾಗದ ಮೂಳೆಗೆ ಕ್ಯಾನ್ಸರ್​ ಆವರಿಸಿತ್ತು. ವೈದ್ಯರು ಕಾಲನ್ನು ತೆಗೆಯುವ ಸುಲಭ ಹಾದಿ ಹಿಡಿಯದೆ ಸವಾಲು ಸ್ವೀಕರಿಸಿದರು. ಕ್ಯಾನ್ಸರ್​ ಪೀಡಿತ ಮೂಳೆಯ ಭಾಗ ತೆರವುಗೊಳಿಸಿ, ಆ ಜಾಗದಲ್ಲಿ ಕೃತಕ ಟೈಟಾನಿಯಂ ಜಾಯಿಂಟ್​ ಅಳವಡಿಸಿದರು.

ಎರಡನೇ ಪ್ರಕರಣ

ಎರಡನೇ ಪ್ರಕರಣವು ವೈದ್ಯಕೀಯವಾಗಿ ಮತ್ತಷ್ಟು ಕ್ಲಿಷ್ಟಕರವಾಗಿತ್ತು. ರೋಗಿಯ ಬಲ ತೊಡೆಯಲ್ಲಿ 'ಲಿಪೊಸಾರ್ಕೋಮಾ' ಎಂಬ ಬೃಹತ್​ ಕ್ಯಾನ್ಸರ್​ ಗಡ್ಡೆಯಿತ್ತು. ಅದು ಕಾಲಿನ ಮುಖ್ಯ ರಕ್ತನಾಳ ಮತ್ತು ಪ್ರಮುಖ ನರವನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ರೋಗಿಯ ಕಾಲು ಶಾಶ್ವತವಾಗಿ ಪಾರ್ಶ್ವವಾಯುವಿಗೆ ಈಡಾಗುವ ಅಪಾಯವಿತ್ತು. ವೈದ್ಯರು ರಕ್ತನಾಳ ಹಾಗೂ ನರಗಳಿಗೆ ಯಾವುದೇ ಹಾನಿಯಾಗದಂತೆ ಆ ಕ್ಯಾನ್ಸರ್​ ಗಡ್ಡೆಯನ್ನು ಯಶಸ್ವಿಯಾಗಿ ಬೇರ್ಪಡಿಸಿ ಹೊರತೆಗೆದರು.
ಶಸ್ತ್ರಚಿಕಿತ್ಸೆಯಲ್ಲಿ ಸರ್ಜಿಕಲ್​ ಅಂಕಾಲಜಿಸ್ಟ್​ ಡಾ. ಅನಂತ್​ ಎಸ್​. ಮಠದ್​ ನೇತೃತ್ವದಲ್ಲಿ ಆಥೋರ್ ಅಂಕಾಲಜಿಸ್ಟ್​ ಡಾ. ನವನೀತ್​, ಅರಿವಳಿಕೆ ತಜ್ಞ ಡಾ. ಸುಖೇನ್​ ಶೆಟ್ಟಿ ಮತ್ತು ಆಸ್ಪತ್ರೆಯ ನರ್ಸಿಂಗ್​ ತಂಡ ಪಾಲ್ಗೊಂಡಿತ್ತು.

ಅತ್ಯಂತ ಕಠಿಣ ವೈದ್ಯಕೀಯ ಪ್ರಕ್ರಿಯೆ

ಸರ್ಜಿಕಲ್​ ಅಂಕಾಲಜಿ ಕ್ಷೇತ್ರದಲ್ಲಿ 'ಲಿಂಬ್​ ಸಾಲ್ವೇಜ್​' ಶಸ್ತ್ರ ಚಿಕಿತ್ಸೆಯು ಅತ್ಯಂತ ಕಠಿಣ ಪ್ರಕ್ರಿಯೆಯಾಗಿದೆ. ಹಿಂದೆಲ್ಲ ಇಂತಹ ಪ್ರಕರಣಗಳಲ್ಲಿ ಕಾಲನ್ನು ತೆಗೆಯುವುದೇ ಏಕೈಕ ಮಾರ್ಗವಾಗಿತ್ತು. ಆದರೆ, ಇಂದಿನ ಆಧುನಿಕ ತಂತ್ರಜ್ಞಾನದಿಂದ ವೈದ್ಯರಿಗೆ ಕ್ಯಾನ್ಸರ್​ ನಿಮೂರ್ಲನೆ ಮಾಡುವುದರ ಜೂತೆಗೆ ರೋಗಿಯ ಸ್ವಾವಲಂಬನೆ ಕಾಪಾಡಬಹುದು. ಕುಟುಂಬವನ್ನು ಸಲಹುವ ಯುವಕನೊಬ್ಬ ಕಾಲು ಕಳೆದುಕೊಂಡರೆ ಇಡೀ ಕುಟುಂಬವೇ ಸಾಮಾಜಿಕವಾಗಿ ಕುಸಿದುಹೋಗುತ್ತದೆ. ರೋಗಿ ತನ್ನದೇ ಕಾಲಿನಿಂದ ನಡೆದುಕೊಂಡು ಹೋಗುವುದು ನಿಜವಾದ ಗೆಲುವು ಎಂದು ಸರ್ಜಿಕಲ್​ ಅಂಕಾಲಜಿಸ್ಟ್​ ಡಾ. ಅನಂತ್​ ಎಸ್​. ಮಠದ್​ ವಿವರಿಸಿದ್ದಾರೆ.
"

ಈ ಸಾಧನೆಯು ಉಡುಪಿಯ ವೈದ್ಯಕೀಯ ಇತಿಹಾಸದಲ್ಲಿ ಹಾಗೂ ಕರಾವಳಿ ಭಾಗದ ಸುಧಾರಿತ ಸರ್ಜಿಕಲ್​ ಅಂಕಾಲಜಿ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು. ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್​ ಗಡ್ಡೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಯುವಕರಿಬ್ಬರನ್ನು ಅಂಗವೈಕಲ್ಯದ ಭೀತಿಯಿಂದ ಪಾರುಮಾಡಲಾಗಿದೆ. ಕ್ಯಾನ್ಸರ್​ ಎಂದರೆ ಬದುಕಿನ ಅಂತ್ಯವಲ್ಲ. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದಿಂದ ರೋಗಿಯ ಜೀವ ಮತ್ತು ಜೀವನ ಎರಡನ್ನೂ ಉಳಿಸಬಹುದು.

— ಡಾ. ಜಿ.ಎಸ್​. ಚಂದ್ರಶೇಖರ್​. ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ.