ಪೊಲೀಸ್ ಕಸ್ಟಡಿಯಲ್ಲಿರುವ ಬ್ಲ್ಯಾಕ್ಮೇಲ್ ಆರೋಪಿ ಝೀನತ್.
* ಆರೋಪಿ ಝೀನತ್ ವಿರುದ್ಧ ಮುಂದುವರಿದ ತನಿಖೆ
* ಮೋಸದಿಂದ ಹಲವರಿಗೆ ಲಕ್ಷಾಂತರ ರೂ. ವಂಚನೆ
ಉಡುಪಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ 70 ಲಕ್ಷ ರೂ. ಪಡೆದು, ಬಳಿಕ ಅಶ್ಲೀಲ ವಿಡಿಯೋ ಇದೆ ಎಂದು ನಿರಂತರ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಹಾಗೂ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಮಹಿಳೆ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮತ್ತೆರಡು ಪ್ರಕರಣ ದಾಖಲಾಗಿದೆ.
ಕಾಪು ತಾಲೂಕಿನ ಪಡುಬಿದ್ರೆ ನಡ್ಸಾಲು ಗ್ರಾಮದ ಕಂಚಿನಡ್ಕ ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಮಾಡಿದ್ದ ಅಬ್ದುಲ್ ಸಲಾಂ ಅವರ ಪತ್ನಿ ಝೀನತ್ ಇಬ್ರಾಹಿಂ (41) ವಿರುದ್ಧ ಇನ್ನಿಬ್ಬರು ವಂಚನೆ, ಮೋಸ ಹಾಗೂ ಬ್ಲ್ಯಾಕ್ಮೇಲ್ ಮಾಡುತ್ತಿರುವುದಾಗಿ ದೂರು ನೀಡಿದ್ದಾರೆ.
ಬಂಧಿತ ಆರೋಪಿ ಮಹಿಳೆಯ ಬಳಿ ಪೆನ್ಡೆವ್ ಲಭಿಸಿದ್ದು ಅದರಲ್ಲಿ ಹಲವು ಗಣ್ಯರ ಹಾಗೂ ಶ್ರೀಮಂತರ ಅಶ್ಲೀಲ ಫೋಟೋ ಹಾಗೂ ವಿಡಿಯೋ ಇರುವುದರಿಂದ ಪೊಲೀಸರು ಈ ಮಹಿಳೆಯಿಂದ ಯಾರಾದರೂ ವಂಚನೆಗೆ ಒಳಗಾಗಿದ್ದಲ್ಲಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ಇನ್ನಿಬ್ಬರು ಇದೇ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಬೆದರಿಕೆ
ಜು.8ರಂದು ಮಣಿಪಾಲ ಮೂಲದವರೊಬ್ಬರು ಮಣಿಪಾಲ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಝೀನತ್ ಎಂಬವರು ತನಗೆ ಪರಿಚಯವಿದ್ದು, ನನಗೆ ತುರ್ತಾಗಿ 50 ಲಕ್ಷ ರೂ. ಹಣದ ಅವಶ್ಯಕತೆ ಇದೆ. ನನಗೆ ಅಲ್ಪ ಸಂಖ್ಯಾತರ ಯೋಜನೆಯಡಿ ಎರಡು ಕೋಟಿ ರೂ. ಸಾಲ ಮಂಜೂರಾಗಲಿದ್ದು, ಸಾಲ ಬಂದ ಕೂಡಲೇ ವರ್ಷದೊಳಗೆ ಹಣ ಹಾಗೂ ಚಿನ್ನ ಹಿಂತಿರುಗಿಸುತ್ತೇನೆ ಎಂದು ನಂಬಿಸಿ 2020ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುಮಾರು 148 ಗ್ರಾಂ ಚಿನ್ನವನ್ನು ಫೈನಾನ್ಸ್ನಲ್ಲಿ ಅಡವಿಟ್ಟು 4.36 ಲಕ್ಷ ಹಣ ಕೊಟ್ಟಿರುತ್ತೇನೆ. ಈ ವೇಳೆ ಝೀನತ್ ಅವರೊಂದಿಗೆ ಗೀತಾ ರಾವ್ ಎಂಬ ಮಹಿಳೆಯೂ ಇದ್ದರು. ಒಂದೂವರೆ ವರ್ಷಗಳ ಕಾಲ ಸಾಲದ ಕಂತು ಕಟ್ಟುತ್ತಿದ್ದು ನಂತರ ಸಾಲಕ್ಕೆ ಹಣ ಕಟ್ಟದೆ, ನನ್ನಿಂದ ಪಡೆದ ಚಿನ್ನವನ್ನೂ ಹಿಂತಿರುಗಿಸಿಲ್ಲ. ಅವರ ಮನೆಗೆ ಹೋಗಿ ಕೇಳಿದರೆ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ. ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಝೀನತ್ ಮತ್ತು ಅವಳ ತಮ್ಮನ ಹೆಂಡತಿ ಬೆದರಿಕೆ ಹಾಕಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
51.84 ಲಕ್ಷ ರೂ. ವಂಚನೆ
ಉಡುಪಿ ಬನ್ನಂಜೆ ಮೂಲದ ಇನ್ನೊಬ್ಬರು ಜು.8ರಂದು ಉಡುಪಿ ನಗರ ಠಾಣೆಯಲ್ಲಿ ಝೀನತ್ ವಿರುದ್ಧ ದೂರು ನೀಡಿದ್ದಾರೆ. 2018ರಿಂದ 2022ರ ವರೆಗೆ ಉಡುಪಿಯ ಮಹಾಮಾಯ ಕಾಂಪ್ಲೆಕ್ಸ್ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿ ನಡೆಸುತ್ತಿದ್ದ ವೇಳೆ ಝೀನತ್ ಮತ್ತು ಗೀತಾ ರಾವ್ ಪರಿಚಯವಾಗಿದ್ದರು. ಝೀನತ್ ಒಮ್ಮೆ ನಮ್ಮ ಅಂಗಡಿ ಬಂದು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಒಂದು ವಿಡಿಯೋ ಮಾಡಿಕೊಂಡಿದ್ದರು. ಬಳಿಕ ಆ ವಿಡಿಯೋ ತೋರಿಸಿ, ನಾನು ಕೇಳಿದಾಗೆಲ್ಲ ಹಣ ಕೊಡಬೇಕು, ಇಲ್ಲದಿದ್ದರೆ ನಿಮ್ಮ ವಿಡಿಯೋ ನನ್ನಲ್ಲಿದೆ. ಅದನ್ನು ವೈರಲ್ ಮಾಡಿ, ನಿಮ್ಮ ಮರ್ಯಾದೆ ತೆಗೆಯುತ್ತೇನೆ, ನಿಮ್ಮ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಿಸಿ ಜೈಲಿಗೆ ಹೋಗುವಂತೆ ಮಾಡುತ್ತೇನೆ ಎಂದು ಬೆದರಿಸುತ್ತಿದ್ದಳು. ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಪದೇಪದೆ ಬ್ಲ್ಯಾಕ್ಮೇಲ್ ಮಾಡಿ ನನ್ನಿಂದ ಹಂತ ಹಂತವಾಗಿ 36.84 ಲಕ್ಷ ರೂ.ವನ್ನು ಮೋಸದಿಂದ ತೆಗೆದುಕೊಂಡಿದ್ದಾಲೆ. ಅಲ್ಲದೆ, ಗೀತಾ ರಾವ್ ಎಂಬವಳೂ ಸಹ ನನಗೆ ಬ್ಲ್ಯಾಕ್ಮೇಲ್ ಮಾಡಿ ಹಂತ ಹಂತವಾಗಿ 15 ಲಕ್ಷ ರೂ.ವನ್ನು ಮೋಸದಿಂದ ತೆಗೆದುಕೊಂಡಿದ್ದಾಳೆ. ಚಿನ್ನಾಭರಣಗಳನ್ನೂ ಸಹ ತೆಗೆದುಕೊಂಡಿದ್ದಲ್ಲದೆ, ಕೆಲವು ಬ್ಯಾಂಕ್ ಚೆಕ್ಗಳನ್ನೂ ಸಹ ಪಡೆದು ವಂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.