ಉಡುಪಿ: ದೇಶದ ವಿವಿಧ ರಾಜ್ಯಗಳ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂಧೌಶಿ ತಾಲೂಕಿನ ಆಕ್ರೌಲಿ ಗ್ರಾಮದ ಮೊಹಮ್ಮದ್ ಜಾಫರ್ (22) ಎಂಬಾತನನ್ನು ಉಡುಪಿ ಇಂದ್ರಾಳಿ ರೈಲ್ವೆ ಸ್ಟೇಶನ್ ಬಳಿ ಹಾಗೂ ಇದೇ ರಾಜ್ಯ ಗ್ರಾಮದ ಕದೀರ್ (32) ಎಂಬಾತನನ್ನು ಮೂಡಬಿದ್ರೆಯಲ್ಲಿ ಬಂಧಿಸಿದ್ದಾರೆ.
ಬಂಧಿತರ ಬಳಿಯಿದ್ದ ನಗದು 1. 65 ಲಕ್ಷ ರೂ., 6 ಸಾವಿರ ರೂ. ಮೌಲ್ಯದ ಬೆಳ್ಳಿ ಕಾಯಿನ್, 1.50 ಲಕ್ಷ ಬೆಲೆಯ ವಿವಿಧ ಕಂಪನಿಯ 5 ವಾಚ್, ಮನೆಯ ಬಾಗಿಲು ಮುರಿಯುವ ಕೃತ್ಯಕ್ಕೆ ಬಳಸಿದ್ದ 2 ಸ್ಕ್ರೂಡೆವರೆ ಸೇರಿ ಒಟ್ಟು 4,50,500 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.
ಉಡುಪಿಯ ಅಂಬಲಪಾಡಿ ನಿವಾಸಿ ಎ.ಎಸ್. ರಾಮಮೂರ್ತಿ (70) ಎಂಬವರು ಜು.1ರಂದು ಮನೆಗೆ ಬೀಗ ಹಾಕಿ ಮಂಗಳೂರಿನಲ್ಲಿದ್ದ ತನ್ನ ಮಗಳ ಮನೆಗೆ ತೆರಳಿ, ಜು.9ರಂದು ಮರಳಿ ಬಂದಿದ್ದರು. ಈ ವೇಳೆ ಅವರ ಮನೆಯ ಕಪಾಟಿನಲಿದ್ದ ಬಟ್ಟೆಗಳನ್ನೆಲ್ಲ ಎಳೆದು ಹೊರ ಹಾಕಿ, ಅಲ್ಲಿದ್ದ 6 ಲಕ್ಷ ರೂ., ಮಗನ ಕಪಾಟಿನಲ್ಲಿದ್ದ 3 ವಾಚ್ಅನ್ನು ಕಳ್ಳರು ಕದ್ದಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ ಪ್ರಸಾದ್ ನೇತೃತ್ವದಲ್ಲಿ ಕಳ್ಳರ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು. ಪೊಲೀಸ್ ಉಪನಿರೀಕ್ಷಕರಾದ ರತ್ನಾಕರ್ ಕೆ., ಎಎಸ್ಐ ಹರೀಶ್ ಹಾಗೂ ಪ್ರಸನ್ನ ಸಿ., ಜೀವನ್ ಕುಮಾರ್, ಆನಂದ ಗಾಣಿಗ, ಓಬಳೇಶ್, ಆನಂದಯ್ಯ, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಕಾರ್ಯಾಚರಣೆಯಲ್ಲಿದ್ದರು.
ಆರೋಪಿಗಳು ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಸದಸ್ಯರಾಗಿದ್ದು ಮೂಲತ: ಉತ್ತರ ಪ್ರದೇಶದ ಬನಿಯಾಟೇರ್ ಚಂದೌಶಿ ಅಕ್ರೌಲಿ ನಿವಾಸಿಗಳಾಗಿದ್ದಾರೆ. ಮೊಹ್ಮದ್ ಜಾಫರ್ನ ವಿರುದ್ಧ ಉತ್ತರಾಖಂಡ ರಾಜ್ಯದ ನೈನಿತಾಲ್ ಪೊಲೀಸ್ ಠಾಣೆಯಲ್ಲಿ 1 ಮನೆಕಳ್ಳತನ ಪ್ರಕರಣ, ಕದೀರ್ ವಿರುದ್ಧ ಬನಿಯಾಟೇರ್ ಪೊಲೀಸ್ ಠಾಣೆಯಲ್ಲಿ 1 ಅಕ್ರಮ ಶಸ್ತ್ರಾಸ್ತ ಪ್ರಕರಣ ಮತ್ತು 2 ಮನೆಕಳ್ಳತನ ಪ್ರಕರಣ ದಾಖಲಾಗಿದೆ. ಮುರದಾಬಾದ್ನ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ 1 ಅಕ್ರಮ ಶಸ್ತ್ರಾಸ್ತ ಪ್ರಕರಣ ಮತ್ತು 2 ಮನೆಕಳ್ಳತನ ಪ್ರಕರಣ ಸೇರಿ ಒಟ್ಟು 6 ಪ್ರಕರದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.> ಹರಿರಾಮ್ ಶಂಕರ್. ಉಡುಪಿ ಎಸ್ಪಿ