ಉಡುಪಿಯಲ್ಲಿ ಪ್ರೊ. ಮಾಧವ ಗಾಡ್ಗೀಳ ಸ್ಮರಣಾರ್ಥ ಆಯೋಜಿಸಿದ್ದ ಸಮ್ಮೇಳನದಲ್ಲಿ ಅಖಿಲೇಶ್ ಚಿಪ್ಪಳಿ ಮಾತನಾಡಿದರು. ಡಾ. ಪಿ.ವಿ ಭಂಡಾರಿ, ಟಿ.ಎ. ಪ್ರಶಾಂತಬಾಬು, ಮಮತಾ ರೈ, ಉದಯ್ ಗಾಂವಕಾರ, ಅಭಿಲಾಷಾ, ಸಂತೋಷ್ ನಾಯಕ್ ಪಟ್ಲ ಇದ್ದರು.
* ಹೋರಾಟಗಾರ ಅಖಿಲೇಶ್ ಚಿಪ್ಪಳಿ ಅನಿಸಿಕೆ
* ಸ್ಮರಣಾರ್ಥ 'ಪರಿಸರ-ಶಿಕ್ಷಣ ಸಮ್ಮೇಳನ'
ಉಡುಪಿ: ಸಕಲ ಜೀವರಾಶಿಗಳ ಉಸಿರಾಗಿರುವ ಪಶ್ಚಿಮ ಘಟ್ಟದ ರಕ್ಷಣೆ, ಉಳಿವಿಗಾಗಿ ವಿಜ್ಞಾನಿ ಪ್ರೊ. ಮಾಧವ ಗಾಡ್ಗೀಳ ಅವರು 2011ರಲ್ಲಿ ಕೇಂದ್ರ ಸರ್ಕಾರಕ್ಕೆ 522 ಪುಟಗಳ ವರದಿ ನೀಡಿದ್ದರು. ಅದು ತಿರಸ್ಕೃತಗೊಂಡು ಪಶ್ಚಿಮ ಘಟ್ಟಗಳ ಮೇಲೆ ಸರ್ಕಾರಿ ಕೃಪಾಪೋಷಿತ ದೌರ್ಜನ್ಯ ನಿರಂತರ ಸಾಗಿದೆ. ಗಾಡ್ಗೀಳ ಅವರನ್ನು ಪಶ್ಚಿಮ ಘಟ್ಟಗಳ ವಿಲನ್ ಎಂದು ಬಿಂಬಿಸಲಾಯಿತು. ಅವರು ಮನಸ್ಸು ಮಾಡಿದ್ದರೆ ವಿದೇಶದಲ್ಲಿ ದೊಡ್ಡ ಉದ್ಯೋಗಿ ಆಗಬಹುದಿತ್ತು. ಆದರೆ, ಪರಿಸರ ರಕ್ಷಣೆಗಾಗಿ ಮಣ್ಣಿಗೆ ಬಂದರು. ಪಶ್ಚಿಮ ಘಟ್ಟದ ಉಳಿವಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದರು ಎಂದು ಲೇಖಕ ಮತ್ತು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ತಿಳಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿ (ಬಿಜಿವಿಎಸ್) ಉಡುಪಿ ಜಿಲ್ಲೆ ವತಿಯಿಂದ ಪ್ರೊ. ಮಾಧವ ಗಾಡ್ಗೀಳ ಸ್ಮರಣಾರ್ಥ ಶನಿವಾರ (ಮೇ 9) ಆಯೋಜಿಸಿದ್ದ ಎರಡು ದಿನಗಳ 'ಪರಿಸರ ಮತ್ತು ಶಿಕ್ಷಣ ಸಮ್ಮೇಳನ' ಉದ್ಘಾಟಿಸಿ ಮಾತನಾಡಿದರು.
ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಮಾತನಾಡಿ, ಸರ್ಕಾರ ಅಭಿವೃದ್ಧಿ ನೆಪದಲ್ಲಿ ಪರಿಸರಕ್ಕೆ ಮಾರಕ ಹಾಗೂ ಹಾನಿಯಾಗುವ ಯೋಜನೆಯನ್ನೇ ಜಾರಿ ಮಾಡುತ್ತಿವೆ. ಅಭಿವೃದ್ಧಿಯೆಂದರೆ ಬೃಹತ್ ಮರಗಳನ್ನು ಕಡಿದು ರಸ್ತೆ, ಕಟ್ಟಡ ನಿರ್ಮಿಸುವುದಾಗಿದೆ. ಪರಿಸರದ ಮೇಲೆ ಹೆಚ್ಚು ಒತ್ತಡ ಹಾಕಿ ಮನುಷ್ಯ ಸುಖೀ ಜೀವನ ನಡೆಸುವುದು ಅಭಿವೃದ್ಧಿಯಾಗಿದೆ. ಪ್ರಕೃತಿಯ ಬಗ್ಗೆ ಅಕ್ಕರೆ ಇಲ್ಲದೆ, ಪರಿಸರ ಅರ್ಥಮಾಡಿಕೊಳ್ಳದೆ ಕೇವಲ ಗಿಡ ನೀಡುವುದರಿಂದ ಏನೂ ಪ್ರಯೋಜನವಿಲ್ಲ ಎಂದರು.
ಸಮಿತಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ವಜ್ರಮುನಿ ಮಾತನಾಡಿ, ಪ್ರೊ. ಮಾಧವ ಗಾಡ್ಗೀಳ ಅವರೊಂದಿನ ಒಡನಾಟ, ಅವರ ವ್ಯಕ್ತಿತ್ವ, ಕಾಡುಗಳ ಕುರಿತು ಅವರು ಹೊಂದಿದ್ದ ಚಿಂತನೆ ಮತ್ತು ಸಮಿತಿಯ ವಿವಿಧ ಯೋಜನೆ, ಕೈಗೊಂಡ ಕಾರ್ಯಗಳ ಸವಿವರ ನೀಡಿದರು.
ಸಮಿತಿಯ ಜಿಲ್ಲಾಧ್ಯಕ್ಷ, ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಚೇಗರೆಡ್ಡಿ, ಉಡುಪಿಯ ಪರಿಸರ ಚಿಂತಕಿ ಮಮತಾ ರೈ, ಸಮಿತಿಯ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷೆ ಅಭಿಲಾಷಾ ಉಪಸ್ಥಿತರಿದ್ದರು.
ಬಿಜಿವಿಎಸ್ ಉಡುಪಿ ಸಂಗಾತಿಗಳು ಪರಿಸರದ ವಿವಿಧ ಗೀತೆ ಹಾಡಿದರು. 'ಟೀಚರ್' ಶೈಕ್ಷಣಿಕ ಪತ್ರಿಕೆಯ ಸಂಪಾದಕ ಉದಯ್ ಗಾಂವಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್ ತೆಕ್ಕಟ್ಟೆ ವಂದಿಸಿದರು. ಸಮಿತಿಯ ಕಾರ್ಯದರ್ಶಿ ಸಂತೋಷ ನಾಯಕ್ ಪಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ 18 ಜಿಲ್ಲೆಗಳ 60 ಸಂಗಾತಿಗಳು ಪಾಲ್ಗೊಂಡಿದ್ದರು.
ತಜ್ಞರು, ವಿಜ್ಞಾನಿಗಳಿಂದ ಉಪನ್ಯಾಸ
ಸಮ್ಮೇಳನದಲ್ಲಿ ಪರಿಸರ ತಜ್ಞರು, ವಿಜ್ಞಾನಿಗಳ ಸಹಭಾಗಿತ್ವದಲ್ಲಿ ವಿಶೇಷ ಉಪನ್ಯಾಸ ನಡೆಯಿತು. 'ಜನರ ಬದುಕಿನ ಪರಿಸರ ವಿವೇಕ' ಕುರಿತು ಖ್ಯಾತ ಪರಿಸರ ವಿಜ್ಞಾನಿ ಡಾ. ಸುಭಾಶ್ಚಂದ್ರನ್ ಎಂ.ಡಿ., 'ಶಾಲೆಯ ಬಯಲಿನಲ್ಲೇ ಕಾಡು' ಕುರಿತು ಹಾಸನದ ಪರಿಸರ ಸಂವಹನಕಾರ ಅಹಮದ್ ಹಗರೆ, 'ಕಾಡಿನ ಮಾತು ಕೇಳಿಸಿಕೊಳ್ಳುವ ಬಗೆ' ಕುರಿತು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ ಉಪನ್ಯಾಸ ನೀಡಿದರು. ಹಸಿರು ಸಾಧಕರ ಯಶಸ್ಸಿನ ಕಥೆಗಳು ಎಂಬ ಅಧಿವೇಶನದಲ್ಲಿ 'ಸುಸ್ಥಿರ ಕೃಷಿ ಮತ್ತು ವಾತಾವರಣ ನ್ಯಾಯ' ಕುರಿತು ಪ್ರೊ.ಶಿವಕುಮಾರ್, 'ನಶಿಸುತ್ತಿರುವ ಸಂಪತ್ತು-ತಳಿ ವೈವಿಧ್ಯ' ಕುರಿತು ಆಸ್ಮಾ ಬಾನು, 'ಸಾವಯವ ಕೃಷಿ ಬದುಕಿನ ಅನುಭವ' ಕುರಿತು ಶಾನಾಡಿ ರಾಮಚಂದ್ರ ಭಟ್, 'ಮತ್ತೆ ಜೀವಿಸುತ್ತಿರವ ಕೆರೆಗಳು' ಕುರಿತು ನಿತಿನ್ ವಾಸ್, 'ಮಕ್ಕಳಿಗೆ ಹಕ್ಕಿಗಳ ಪರಿಚಯಿಸೋಣ' ಕುರಿತು ಅರವಿಂದ ಕುಡ್ಲ ಮಾತನಾಡಿದರು. ಪ್ರೇಮಾನಂದ ಕಲ್ಮಾಡಿ ಸಮನ್ವಯ ಕಾರ್ಯ ನಡೆಸಿದರು.