ಉಡುಪಿಯ ಚಿತ್ರಕಲಾ ಮಂದಿರದಲ್ಲಿ ನಡೆದ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪಿ.ಎನ್. ಆಚಾರ್ಯ ಹಾಗೂ ವೆಂಕಟರಮಣ ಭಟ್ ಅವರನ್ನು ಸನ್ಮಾನಿಸಲಾಯಿತು. ಡಾ. ಯು.ಸಿ. ನಿರಂಜನ್, ತನುಲಾ ತರುಣ್, ಎಂ.ಪ್ರಭಾಕರ್ ಕಿಣಿ, ಯು. ಶಕುಂತಲಾ ಆರ್. ಶೆಣೈ, ರವಿ ಹಿರೇಬೆಟ್ಟು ಇದ್ದರು.
* ಕಲಾವಿದ ಪಿ.ಎನ್. ಆಚಾರ್ಯ ಅನಿಸಿಕೆ
* ಎರಡು ದಿನಗಳ ಪ್ರದರ್ಶನ ಉದ್ಘಾಟನೆ
ಉಡುಪಿ: ಚಿತ್ರಕಲೆಯು ಎಲ್ಲ ಕ್ಷೇತ್ರಗಳನ್ನೂ ಒಳಗೊಂಡ ಏಕೈಕ ಕಲೆಯಾಗಿದೆ. ಆದರೆ, ಈ ಕಲೆಯಲ್ಲಿ ಸೌಂದರ್ಯ ಪ್ರಜ್ಞೆ ಅತ್ಯಗತ್ಯ. ಕಲಾವಿದನಷ್ಟೇ ಪ್ರೇಕ್ಷಕರಿಗೂ ಸಹ ಚಿತ್ರಕಲೆಗಳ ಪ್ರಮಾಣಗಳ ಬಗ್ಗೆ ತಿಳಿದಿರಬೇಕಿದೆ. ಚಿತ್ರಕಲೆಯಲ್ಲಿಯೂ ಸಹ ಸನಾತನ ಧರ್ಮದ ಬಲವಾದಶಕ್ತಿ ಇದೆ. ಆದರೆ, ಈ ಕಲೆಗೆ ಯಾವುದೇ ಧರ್ಮ ಅಥವಾ ಭಾಷೆಯ ಚೌಕಟ್ಟು ಇಲ್ಲ ಎಂದು ಚಿತ್ರಕಲಾ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ವೈದ್ಯಕೀಯ ಚಿತ್ರಗಳ ಖ್ಯಾತ ಹಿರಿಯ ಕಲಾವಿದ ಪಿ.ಎನ್. ಆಚಾರ್ಯ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಸರ್ವೀಸ್ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಶನಿವಾರ (ಮಾ.14) ಆಯೋಜಿಸಿದ್ದ ಹಿರಿಯ ಕಲಾವಿದ ಎಂ.ಪ್ರಭಾಕರ್ ಕಿಣಿ, ಯು. ಶಕುಂತಲಾ ಆರ್. ಶೆಣೈ ಹಾಗೂ ಯುವ ಕಾವಿ ಕಲಾವಿದ ರವಿ ಹಿರೇಬೆಟ್ಟು ಅವರ ಚಿತ್ರಕಲೆಗಳ ಎರಡು ದಿನದ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲೆಗೆ ಪ್ರೋತ್ಸಾಹ ಅಗತ್ಯ
ಕಾರ್ಯಕ್ರಮ ಉದ್ಘಾಟಿಸಿದ ಕಾರ್ಕಳ ತಾಲೂಕಿನ ಬೈಲೂರಿನ ಹೊಸಬೆಳಕು ಆಶ್ರಮದ ಸಂಸ್ಥಾಪಕಿ ತನುಲಾ ತರುಣ್ ಮಾತನಾಡಿ, ವಿಶೇಷವಾಗಿರುವ ಇಂತಹ ಚಿತ್ರಕಲೆಗಳನ್ನು ರಚಿಸಲು ನಮಗೆ ಬರುವುದಿಲ್ಲ. ಹೀಗಾಗಿ ಚಿತ್ರಕಲಾವಿದರಿಗೆ ನಾವು ಪ್ರೋತ್ಸಾಹ ಹಾಗೂ ಅವಕಾಶ ನೀಡಬೇಕು. ವಿಶೇಷವಾಗಿ ಮಕ್ಕಳನ್ನು ಇಂತಹ ಪ್ರದರ್ಶನಗಳಿಗೆ ಕರೆತರಬೇಕು. ಮಕ್ಕಳು ಚಿತ್ರಕಲೆಗಳಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂದರು.
ಕಲಾವಿದರಿಗೆ ಸನ್ಮಾನ
ಕಾರ್ಯಕ್ರಮದ ನಿಮಿತ್ತ ಹಿರಿಯ ಕಲಾವಿದರಾದ ವೆಂಕಟರಮಣ ಭಟ್, ಪಿ.ಎನ್. ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಖ್ಯಾತ ಉರಗತಜ್ಞ ಗುರುರಾಜ್ ಸನೀಲ್ ಮಾತನಾಡಿ, ಚಿತ್ರಕಲೆಯ ವಿಶೇಷತೆ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಚಿತ್ರಕಲಾ ಮಂದಿರದ ನಿರ್ದೇಶಕ ಡಾ. ಯು.ಸಿ. ನಿರಂಜನ್ ಅಧ್ಯಕ್ಷತೆ ವಹಿಸಿದ್ದರು. ಎಂ.ಪ್ರಭಾಕರ್ ಕಿಣಿ ಉಪಸ್ಥಿತರಿದ್ದರು. ಯು. ಶಕುಂತಲಾ ಆರ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ರವಿ ಹಿರೇಬೆಟ್ಟು ವಂದಿಸಿದರು.
ಅಕ್ರಾಲಿಕ್, ಉಬ್ಬುಕಲೆ ಹಾಗೂ ವಿವಿಧ ಪ್ರಕಾರಗಳ 140ಕ್ಕೂ ಅಧಿಕ ಚಿತ್ರಕಲೆಗಳನ್ನು ಪ್ರದರ್ಶನದಲ್ಲಿ ಇಡಲಾಗಿದ್ದು, ಭಾನುವಾರ (ಮಾ.15) ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವೀಕ್ಷಿಸಬಹುದಾಗಿದೆ.