ACCIDENT 
ಉಡುಪಿ

ಅಪಘಾತದಲ್ಲಿ ಇಬ್ಬರು ಸಜೀವ ದಹನ

ಇಂದಿರಾ ಎನ್ ಕೆ

ಕಾಸರಗೋಡು: ಕಣ್ಣೂರಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾಂಕ್ರೀಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡಿದ್ದಾರೆ. ಹೊಸದುರ್ಗ ಮಾವುಂಗಾಲ್ ನಿವಾಸಿ ಇಬಿನೈಸರ್ ಆಂಟೊ (24) ಮತ್ತು ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಶೆಬಿನ್ (22) ಮೃತರು.

ಕಣ್ಣೂರು ಪಿಲಾತ್ತರ ಮಂಡೂರು ರಾಜ್ಯ ಹೆದ್ದಾರಿಯ ಮಂಡೂರು ಮಸೀದಿ ಸಮೀಪ ಸೋಮವಾರ ನಸುಕಿನ ಜಾವ 3.25ಕ್ಕೆ ಅಪಘಾತ ನಡೆದಿದೆ. ವಳಯಂಗಾಡಿಯಿಂದ ಬರುತ್ತಿದ್ದ ಲಾರಿಯ ಕ್ಲಚ್ ಕೆಟ್ಟುಹೋದ ಪರಿಣಾಮ ಅದನ್ನು ಮಧ್ಯಾಹ್ನ ರಸ್ತೆ ಬದಿ ನಿಲ್ಲಿಸಲಾಗಿತ್ತು. ಅದರ ದುರಸ್ತಿಗಾಗಿ ಸೋಮವಾರ ನಸುಕಿಗೆ ಹೊಸದುರ್ಗದಿಂದ ಮೆಕಾನಿಕ್‌ಗಳು ಬಂದು ಲಾರಿಯ ಕ್ಯಾಬಿನ್‌ನ ತಳಭಾಗವನ್ನು ಪರಿಶೀಲಿಸುತ್ತಿದ್ದಾಗ ಅತಿವೇಗದಲ್ಲಿ ಬಂದ ಮಿಕ್ಸರ್ ಹೆವಿ ಲಾರಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಇಡೀ ಲಾರಿಗೆ ವ್ಯಾಪಿಸಿದೆ. ಅಲ್ಲದೆ ರಿಪೇರಿ ಮಾಡಲು ಬಂದಿದ್ದ ಮೆಕಾನಿಕ್‌ಗಳ ವಾಹನಕ್ಕೂ ಬೆಂಕಿ ಆವರಿಸಿದೆ. ಶಬ್ದ ಕೇಳಿ ಪರಿಸರ ನಿವಾಸಿಗಳು ಸ್ಥಳಕ್ಕಾಗಮಿಸಿದ್ದು, ಅಗ್ನಿಶಾಮಕದಳ ಆಗಮಿಸಿ ಬೆಂಕಿ ತಗುಲಿ ಸಜೀವ ದಹನಗೊಂಡ ಇಬ್ಬರನ್ನೂ ಹೊರತೆಗೆದರು. ಅಪಘಾತದಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿಯ ಚಾಲಕ ಇಡುಕ್ಕಿ ನಿವಾಸಿ ಇಮ್ಮಾನ್ಯುಯೆಲ್(26) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಗಳ ಡಿಕ್ಕಿಯ ರಭಸಕ್ಕೆ ಪರಿಸರದ ಮಸೀದಿಯ ಗೋಡೆಯಲ್ಲಿ ಬಿರುಕು ಉಂಟಾಗಿದೆ.