ಬೆಳ್ತಂಗಡಿ: ಗುರುವಾಯನಕೆರೆಯಿಂದ ಮೂಡುಬಿದಿರೆ ಕಡೆಗೆ ಕಾರಿನಲ್ಲಿ ಮಾದಕವಸ್ತು ಎಂಡಿಎಂಎ ಸಾಗಿಸುತ್ತಿದ್ದ ಇಬ್ಬರನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ತನ್ವೀರ್(27) ಮತ್ತು ಮೂಡುಬಿದಿರೆ ಕಲ್ಲಬೆಟ್ಟು ನಿವಾಸಿ ಮಹಮ್ಮದ್ ಸಲ್ವಾನ್(22) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಬುಧವಾರ ಮಧ್ಯಾಹ್ನ ಕಂಬಳದಡ್ಡ ಎಂಬಲ್ಲಿ ಕಾರನ್ನು ತಡೆದು ಪರಿಶೀಲಿಸಿದಾಗ 40 ಸಾವಿರ ರೂ. ಮೌಲ್ಯದ 4 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಮಾದಕವಸ್ತುವನ್ನು ಬೆಳ್ತಂಗಡಿ ಸುನ್ನತ್ ಕೆರೆ ನಿವಾಸಿ ಹಂಝತ್ ಕರಾರ್ ಮಾರಾಟ ಮಾಡಲು ನೀಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಹಂಜ್ರತ್ ಕರಾರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.