ಹುಲ್ಲು ಮೇಯುತ್ತಿದ್ದ 4 ದನಗಳನ್ನು ಕದ್ದು ಪಿಕ್​ಅಪ್​ ಗೂಡ್ಸ್​ ವಾಹನದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಹಿರಿಯಡ್ಕ ಠಾಣೆ ಪೊಲೀಸರು. 
ಉಡುಪಿ

ಹುಲ್ಲು ಮೇಯುತ್ತಿದ್ದ 4 ದನಗಳ ಕಳವು

* ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರ ಬಂಧನ

ಉಡುಪಿ: ಹುಲ್ಲು ಮೇಯುತ್ತಿದ್ದ 4 ದನಗಳನ್ನು ಕದ್ದು, ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ವಾಹನದ ಚಾಲಕ ಅಬ್ದುಲ್​ ಸತ್ತರ್​ (54) ಹಾಗೂ ಯೋಗೀಶ್​ ನಾಯ್ಕ್​ (49) ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಿರಿಯಡ್ಕ ಜೈಲಿಗೆ ರವಾನಿಸಲಾಗಿದೆ.

ಹರಿಖಂಡಿಗೆ ಕಡೆಯಿಂದ ಹಿರಿಯಡ್ಕ ಕಡೆಗೆ ಅ.9ರಂದು ಸಂಜೆ ಗೂಡ್ಸ್​ ಟೆಂಪೋದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಹಿರಿಯಡ್ಕ ಠಾಣೆಯ ಸಿಬ್ಬಂದಿ ಜಂಕ್ಷನ್​ ಬಳಿ ಆ ವಾಹನವನ್ನು ತಡೆದು ತಪಾಸಣೆ ನಡೆಸಿದರು. ವಾಹನದೊಳಗೆ ಒಟ್ಟು 4 ಜಾನುವಾರಗಳಿದ್ದವು.

ಕಾರ್ಕಳ ತಾಲೂಕು ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಎಂಬವವರ ಮನೆಯ ಸಮೀಪ ಹುಲ್ಲು ಮೇಯುತ್ತಿದ್ದ ಆ ಜಾನುವಾರುಗಳನ್ನು ಕಳವು ಮಾಡಿದ್ದು, ಅದನ್ನು ಪಿಕಪ್​ ಗೂಡ್ಸ್​ ವಾಹನದಲ್ಲಿ ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹಿರಿಯಡ್ಕ ಪೊಲೀಸ್​ ಠಾಣೆಯಲ್ಲಿ ಪ್ರಾಣಿಹಿಂಸಾ ಮತ್ತು ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.