ಕುಂದಾಪುರ: ನಾಡಾ ಗ್ರಾಮದ ಕೋಣ್ಕಿಯ ನಂದ್ರೋಳಿ ಮನೆಯ ಸಾರ್ವಜನಿಕ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಗಂಗೊಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಇಬ್ಬರು ಆರೋಪಿಗಳಾದ ಕಂಬದಕೋಣೆ ಗ್ರಾಮದ ಹಳಗೇರಿ ನಿವಾಸಿ ಸುಧಾಕರ(61) ಮತ್ತು ಕಿರಿಮಂಜೇಶ್ವರ ಗ್ರಾಮದ ಸುರೇಶ(40) ಎಂಬುವರನ್ನು ಬಂಧಿಸಿ, ಜುಗಾರಿ ಆಟಕ್ಕೆ ಬಳಸಿದ 10 ಹುಂಜ, 8 ಬೈಕ್, ಕತ್ತಿ, ಇನ್ನಿತರ ವಸ್ತುಗಳನ್ನು ಹಾಗೂ 2,350 ರೂ. ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳು ಪರಾರಿಯಾಗಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.