ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಇತರ ವಂಚನೆಗಳಿಗಾಗಿ ಬ್ಯಾಂಕ್ ಖಾತೆ ತೆರೆಯಲು ನಕಲಿ ದಾಖಲೆಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಸೇರಿ ಇಬ್ಬರನ್ನು ತಲಶ್ಶೇರಿ ಎಎಸ್‌ಪಿ ಡಾ.ಎಂ.ನಂದಕುಮಾರ್ ನೇತೃತ್ವದ ಪೊಲೀಸರ ತಂಡ ಬೆಂಗಳೂರಿನಲ್ಲಿ ಬಂಧಿಸಿದೆ.
ಕಾಸರಗೋಡು ಮೊಗ್ರಾಲ್ ವಳಪ್ಪಿಲ್ ಅಬ್ದುಲ್ ರಹ್ಮಾನ್(39) ಎರ್ನಾಕುಳಂ ಪಳ್ಳುತುರುತಿಯ ಕೆ.ಎಂ.ರಿಶಾದ್ (41) ಬಂಧಿತರು.
ಆರೋಪಿಗಳಿಂದ ನೂರಕ್ಕೂ ಹೆಚ್ಚು ಆಧಾರ್ ಕಾರ್ಡ್, ಪಾನ್ ಕಾರ್ಡ್, ಹಲವು ನಕಲಿ ಸರ್ಟಿಫಿಕೆಟ್, ಮೊಬೈಲ್ ಸಿಮ್ ಕಾರ್ಡ್‌ಗಳು, ಮೊಹರುಗಳು ಹಾಗೂ ಬ್ಯಾಂಕ್ ಪಾಸ್‌ಪುಸ್ತಕಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಪ್ರಿಂಟಿಂಗ್ ಸ್ಟುಡಿಯೋ ಒಂದರಲ್ಲಿ ತಯಾರಿಸಿ ನಕಲಿ ದಾಖಲೆಪತ್ರ ಮಾಡಿಸಿಕೊಳ್ಳುತ್ತಿದ್ದರು.
ಜತೆಗೆ ಮಾದಕದ್ರವ್ಯ ದಂಧೆಕೋರರಿಗೆ ವಾಸ್ತವ್ಯಕ್ಕೆ ಕೊಠಡಿ, ಪ್ರಯಾಣ ಸೌಕರ್ಯ, ಮಾದಕ ದ್ರವ್ಯ ಸಾಗಾಟಕ್ಕೆ ನಕಲಿ ದಾಖಲೆಪತ್ರ ಒದಗಿಸುತ್ತಿದ್ದರು. ಕೆಲವು ದಿನಗಳ ಹಿಂದೆ 700 ಗ್ರಾಂ ಎಂಡಿಎಂಎ ಪತ್ತೆ ಹಚ್ಚಿ ಬಂಧಿಸಲಾಗಿರುವ ಆಶಾದ್ ಎಂಬಾತನೊಂದಿಗೆ ಈ ತಂಡ ಸಂಪರ್ಕ ಹೊಂದಿಗೆ ಎಂದು ಎಸ್‌ಪಿ ತಿಳಿಸಿದ್ದಾರೆ.