ಉಡುಪಿ ನ್ಯಾಯಾಲಯಕ್ಕೆ ನಕಲಿ ಆಧಾರ್​ ಕಾರ್ಡ್​ ನೀಡಿ ವಂಚಿಸಿ ಬಂಧನಕ್ಕೊಳಗಾದ ಬಂಟ್ವಾಳದ ಉಮ್ಮರ್​ ಫಾರೂಕ್​ ಹಾಗೂ ಮಂಗಳೂರಿನ ನಿಶಾಂತಕುಮಾರ್​. 
ಉಡುಪಿ

ಕೋರ್ಟ್​ಗೆ ನಕಲಿ ಆಧಾರ್​ ಕಾರ್ಡ್​ ನೀಡಿದ್ದ ಆರೋಪಿಗಳ ಬಂಧನ

* ಉಡುಪಿ ನಗರ ಪೊಲೀಸರ ಕಾರ್ಯಾಚರಣೆ

ಉಡುಪಿ: ವಿಶೇಷ ಪ್ರಕರಣವೊಂದರ ಆಪಾದಿತನಿಗೆ ಜಾಮೀನು ಕೊಡಿಸಲು ಬೇರೆಯವರ ಆಧಾರ್​ ಕಾರ್ಡ್​ ನೀಡಿ, ಅವರೇ ತಾವೆಂದು ಸುಳ್ಳು ಹೇಳಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯಾಚರಣೆ ನಡೆಸಿದ್ದ ಉಡುಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಟ್ವಾಳದ ಉಮ್ಮರ್​ ಫಾರೂಕ್​, ಮಂಗಳೂರಿನ ನಿಶಾಂತಕುಮಾರ್​ ಬಂಧಿತ ಆರೋಪಿಗಳು. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆಯ ವಿವರ

ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವಿಶೇಷ ಪ್ರಕರಣವೊಂದಕ್ಕೆ ಸಂಬಂಧಿಸಿ ಆಪಾದಿತ ನೋಮಾನ್​ ಎಂಬಾತನಿಗೆ ಜಾಮೀನು ಕೊಡಿಸಲು ಉಮ್ಮರ್​ ಫಾರೂಕ್​ ಎಂಬಾತನು ಪ್ರಶಾಂತ್​ ಎಂಬವರ ಆಧಾರ್​ ಕಾರ್ಡ್​ಅನ್ನು ಕೆ.ಟಿ. ಮೊಹಮ್ಮದ್​ ಎಂಬವರ ಹೆಸರು ಮತ್ತು ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿದ್ದನು. ಅಲ್ಲದೆ, ತನ್ನ ಸ್ವಂತ ಲಾಭಕ್ಕಾಗಿ ಆ ವ್ಯಕ್ತಿ ತಾನೇ ಎಂದು ನಟಿಸಿ ನ್ಯಾಯಾಲಯಕ್ಕೆ ನೀಡಿದ್ದನು. ತನ್ಮೂಲಕ ನೈಜ ದಾಖಲೆ ಹೊಂದಿದ್ದ ಪ್ರಶಾಂತ್​ ಹಾಗೂ ಕೆ.ಟಿ. ಮೊಹಮ್ಮದ್​ ಅವರಿಗೆ ವಂಚನೆ ಮಾಡಿದ್ದನು. 
ಈ ವಂಚನೆ ಅರಿವಾದ ಬಳಿಕ ಆ.13ರಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಬ್ಬಾಸ್​ ಎಂಬವರು ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿ ಹಾಗೂ ಆತನ ಕೃತ್ಯಕ್ಕೆ ಸಹಕರಿಸಿದವರ ಪತ್ತೆ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್​ ನಿರೀಕ್ಷಕ ಮಹೇಶ್​ ಪ್ರಸಾದ್​ ಪಿ. ಮಾರ್ಗದರ್ಶನದಲ್ಲಿ ಠಾಣೆಯ ಪಿಎಸ್​ಐ ರತ್ನಾಕರ ಕೆ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಎಎಸ್​ಐ ಲೋಕೇಶ್​, ಸಿಬ್ಬಂದಿ  ಸಂತೋಷ್​, ಜಗನ್ನಾಥ್​ ನಾಯ್ಕ್​, ಆನಂದ್​, ಆನಂದಯ್ಯ ಹಾಗೂ ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ, ಹೇಮಂತ್​, ಉಡುಪಿ ನಗರ ಠಾಣೆಯ ಸಿಬ್ಬಂದಿ ಸಹಕರಿಸಿದ್ದರು.