ಪುತ್ತೂರು: ಕಾಣಿಯೂರು ಪುಣ್ಚಾತ್ತಾರು ಎಂಬಲ್ಲಿ ಆಟವಾಡುತ್ತಾ ತೋಟಕ್ಕೆ ತೆರಳಿದ ಅವಳಿ ಮಕ್ಕಳು ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಸಂಭವಿಸಿದೆ. ಪುಣ್ಚಾತ್ತಾರು ವಸಂತ ಕಡೀರ ಎಂಬುವರ ಪುತ್ರರಾದ ಜಶ್ವಿತ್ (5), ಜಶ್ವಿನ್ (5) ಮೃತ ಮಕ್ಕಳು.
ತಂದೆ ಕೆಲಸಕ್ಕೆ ಹೋಗಿದ್ದರು. ಅಜ್ಜಿ ಹಾಗೂ ತಾಯಿ ಕೂಡ ಮನೆಯಲ್ಲಿ ಇರಲಿಲ್ಲ. ಅಜ್ಜ ಮಾತ್ರ ಮನೆಯಲ್ಲಿದ್ದರು. ಅಂಗಳ ಬಿಟ್ಟು ಎಂದೂ ಕೆಳಗೆ ಹೋಗದ ಮಕ್ಕಳು ಇಂದು ಆಡವಾಡುತ್ತ ತೋಟಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಅಜ್ಜ ಹೋಗಬೇಡಿ ಎಂದರೂ ಕೇಳಿರಲಿಲ್ಲ. ಸಂಜೆ ಎಷ್ಟು ಹೊತ್ತಾದರೂ ಮಕ್ಕಳು ಬಾರದಿರುವುದನ್ನು ಗಮನಿಸಿ ಎಲ್ಲ ಕಡೆ ಹುಡುಕಾಟ ನಡೆದಿದೆ. ಕೆರೆ ಕಟ್ಟೆಯ ಮೇಲೆ ಮಕ್ಕಳು ಧರಿಸಿದ್ದ ಟೋಪಿ ಪತ್ತೆಯಾಗಿತ್ತು. ಅದರಂತೆ ಕೆರೆಯಲ್ಲಿ ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಹುಡುಕಾಟ ನಡೆಸಿದಾಗ ಮಕ್ಕಳ ಮೃತದೇಹ ಪತ್ತೆಯಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.