ಅಪಘಾತದಲ್ಲಿ ನಜ್ಜುಗುಜ್ಜಾದ ಲಾರಿಯ ಮುಂಭಾಗ
ಕುಂದಾಪುರ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಗುದ್ದಿದ ಪರಿಣಾಮ ಹಿಂಬದಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಶಿಮಠ ಕ್ರಾಸ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ಮಂಗಳೂರಿನಿಂದ ಅಡುಗೆ ಎಣ್ಣೆ ಪ್ಯಾಕೇಟ್ ತುಂಬಿದ ಬಾಕ್ಸ್‌ಗಳನ್ನು ಬೀದರ್‌ಗೆ ಸಾಗಿಸುತ್ತಿದ್ದ ಲಾರಿಯ ಚಾಲಕ ಮಹಾರಾಷ್ಟ್ರದ ಲಕ್ಷ್ಮಣ ಮುರಳೀಧರ್ ವಾಗ್ಮೋಡೆ (54) ಗಂಭೀರ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಲಾರಿ ಕ್ಲೀನರ್ ದಯಾನಂದ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಹೆಮ್ಮಾಡಿ ಸಮೀಪದ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿಯ ಸೇತುವೆ ಕಾಮಗಾರಿ ಸಲುವಾಗಿ ಬ್ಯಾರಿಕೇಡ್ ಹಾಕಿ ರಸ್ತೆತಡೆ ನಿರ್ಮಿಸಿ ಬಲಕ್ಕೆ ಡೈವರ್ಶನ್ ನೀಡಿದ್ದು, ಎದುರಿದ್ದ ಲಾರಿ ನಿಧಾನವಾಗಿದ್ದರಿಂದ ಹಿಂದಿದ್ದ ಲಾರಿ ಚಾಲಕ ಅತಿವೇಗದಿಂದ ಹೋಗಿ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ್ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.