ವಂದೇ ಭಾರತ್ ರೈಲು. (ಸಾಂದರ್ಭಿಕ ಚಿತ್ರ)
* ಉಡುಪಿ ಜಿಲ್ಲಾ ರೈಲ್ವೆ ಯಾತ್ರಿ ಸಂಘ ಅಸಮಾಧಾನ
* ಮಡಗಾಂವ್ವರೆಗೆ ರೈಲ್ವೆ ವಿಸ್ತರಿಸಲು ಆಗ್ರಹ
ಉಡುಪಿ: ಬೆಂಗಳೂರು ಯಶವಂತಪರದಿಂದ ಮಂಗಳೂರು ಸೆಂಟ್ರಲ್ ಕೇಂದ್ರ ನಿಲ್ದಾಣದ ವರೆಗೆ ಜೂ.3ರಂದು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ, ಆ ಕಾರ್ಯಕ್ರಮ ದಿಢೀರ್ ರದ್ದಾಗಿದ್ದೇಕೆ? ಅದರಲ್ಲಿ ಯಾರ ಪ್ರಭಾವ, ಕೈವಾಡವಿತ್ತೋ ತಿಳಿಯದಾಗಿದೆ ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಶಾಂತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಹಿಂದಿ ಸಭಾಭವನದಲ್ಲಿ ಸಂಘದ ಕಾರ್ಯಕಾರಿ ಸದಸ್ಯರೊಂದಿಗೆ ಈ ವಿಚಾರವಾಗಿ ಸಭೆ ನಡೆಸಿ ಮಾತನಾಡಿ, ವಂದೇ ಭಾರತ್ ರೈಲು ಮಡಗಾಂವ್ ವರೆಗೆ ಸಂಚರಿಸಬೇಕು ಎನ್ನುವುದು ನಮ್ಮ ಬೇಡಿಕೆ. ಆದರೆ, ಮಂಗಳೂರುವರೆಗೆ ಮಾತ್ರ ಸಂಚರಿಸಲಿದೆ ಎಂಬ ಸಂಗತಿ ಅಸಮಾಧಾನ ಮೂಡಿಸಿದ್ದರೂ ಪ್ರಾಯೋಗಿಕ ಸಂಚಾರ ನಡೆಯುತ್ತಿರುವ ಕುರಿತು ಸಂತಸವಿತ್ತು ಎಂದರು.
ವಿಳಂಬಕ್ಕೆ ಕಡಿವಾಣವಾಗಲಿ
ಉಡುಪಿ ನಿಲ್ದಾಣವು ವಾರದಲ್ಲಿ 76 ರೈಲುಗಳು ಹೊರ ಹೋಗುವ, ಒಳ ಬರುವ ನಿಲ್ದಾಣವಾಗಿದೆ. ವಿಶ್ವ ಪ್ರಸಿದ್ಧ ಧಾರ್ಮಿಕ ತಾಣ, ವಿದ್ಯಾ ಮಂದಿರ, ಆರೋಗ್ಯ (ಚಿಕಿತ್ಸಾ) ಕೇಂದ್ರಗಳ ಸನಿಹದ ನಿಲ್ದಾಣವಾಗಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯುತ್ ಯಂತ್ರ ಹೊಂದಿರುವ ರೈಲು ಸಂಚರಿಸುತ್ತಿದೆ. ಹೀಗಾಗಿ ವಿಳಂಬಕ್ಕೆ ಅವಕಾಶ ಆಗದಂತೆ ವೇಳಾಪಟ್ಟಿಗೆ ಅನುಗುಣವಾಗಿ ಅವು ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಗ್ರಹಿಸಲಾಯಿತು.
ವೇಗದೂತಕ್ಕೆ ನೀಡಿ ನಿಲುಗಡೆ
ಅನ್ಯ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಕಡೆ ನಿಲುಗಡೆಯಾಗುವ ಕೇರಳಂ ಎರ್ನಾಕುಲಂ ಜಂಕ್ಷನ್ನಿಂದ -ದೆಹಲಿ ನಿಜ್ಜಾಮುದ್ದೀನ್ ವರೆಗಿನ ವೇಗದೂತ ರೈಲಿಗೆ ಕರ್ನಾಟಕದಲ್ಲಿ ಮಂಗಳೂರಿನಲ್ಲಿ ಮಾತ್ರ ನಿಲುಗಡೆ ಇದೆ. ದಿನನಿತ್ಯ ನೂರಾರು ಪ್ರಯಾಣಿಕರು ಒಳ ಬರುವ, ಹೊರ ಹೋಗುವ ಉಡುಪಿ ನಿಲ್ದಾಣದಲ್ಲಿಯೂ ಈ ರೈಲಿನ ನಿಲುಗಡೆ ಕೊಡಬೇಕು. ತಿರುನೇಲ್ ವೇಲಿ -ಗಾಂಧಿ ಧಾಮ ಹಮ್ ಸಫರ್ ವೇಗದೂತಕ್ಕೂ ನಿಲುಗಡೆ ಕೊಡಬೇಕು ಎಂದು ಆಗ್ರಹಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಖಜಾಂಚಿ ಅಜಿತ್ ಶೆಣೈ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಭಾಕರ್ ಆಚಾರ್ಯ, ಅಪ್ಪು ಶೆಟ್ಟಿಗಾರ್, ರವೀಂದ್ರ ರಾವ್, ರವಿ ಪೂಜಾರಿ ಸೂಕ್ತ ಸಲಹೆ ನೀಡಿದರು. ಎಸ್.ಎಸ್. ತೋನ್ಸೆ ಸ್ವಾಗತಿಸಿ, ವಂದಿಸಿದರು.
ಪ್ರಯಾಣಿಕರಿಗೆ ನೀಡಿ ಇನ್ನಷ್ಟು ಸೌಲಭ್ಯ
ಉಡುಪಿ ನಿಲ್ದಾಣ ಪರಿಸರದ ಸ್ವಚ್ಛತೆ ಕಾಪಾಡಲು, ನಿಲ್ದಾಣದ ಎದುರಿನ ನೀರಿನ ಕಾರಂಜಿ ಪುನಶ್ಚೇತನಗೊಳಿಸಲು ಕೊಂಕಣ ರೈಲು ಇಲಾಖೆ ಅಥವಾ ಸ್ಥಳೀಯ ಆಡಳಿತ ಜಂಟಿಯಾಗಿ ಕಾರ್ಯ ಕೈಗೊಳ್ಳುವಂತೆ ವಿನಂತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಪ್ರಯಾಣಿಕರ ಹಿತದೃಷ್ಟಿಯಿಂದ ಉಡುಪಿ ನಿಲ್ದಾಣದಲ್ಲಿ ಜನೌಷಧ ಕೇಂದ್ರ, ಎಟಿಎಂ ಸೌಲಭ್ಯ ಒದಗಿಸಬೇಕು. 22 ಬೋಗಿಗಳಿರುವ ರೈಲುಗಳಿಗೆ ಹೆಚ್ಚುವರಿಯಾಗಿ ಮತ್ತೆ 4 ಬೋಗಿ ಅಳವಡಿಸಿ ಹೆಚ್ಚು ಜನರಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿಲು ಸಮಿತಿ ಸದಸ್ಯರು ತೀರ್ಮಾನಿಸಿದರು.