ನಿಡಿಗಲ್ ಗ್ರಾಮದ ಶಾಂತಿನಗರದಲ್ಲಿ ತೋಡಿನ ಬದಿಯ ತಡೆಗೋಡೆ ಕುಸಿದಿರುವುದು.
ಬೆಳ್ತಂಗಡಿ: ನಿರಂತರ ಮಳೆಗೆ ಕಲ್ಮಂಜ ಗ್ರಾಮದ ನಿಡಿಗಲ್‌ನ ಶಾಂತಿನಗರ ಲೇಔಟ್‌ನಲ್ಲಿ ತೋಡಿನ ತಡೆಗೋಡೆ ಕುಸಿದು, ಮನೆಯೊಂದು ಅಪಾಯದ ಸ್ಥಿತಿಯಲ್ಲಿದೆ. ತಡೆಗೋಡೆಯ ಕುಸಿತ ಮುಂದುವರಿಯುತ್ತಿರುವುದರಿಂದ ಮನೆ ಮಂದಿ ಭಯದಲ್ಲೇ ದಿನ ಕಳೆಯುವಂತಾಗಿದೆ.
ಶಾಂತಿನಗರ ಲೇಔಟ್‌ನ ನಿವಾಸಿ ಮಂಜುಳಾ ಅವರ ಮನೆಯ ಪಕ್ಕದಲ್ಲೇ ನೇತ್ರಾವತಿ ನದಿಗೆ ಸಂಪರ್ಕ ಹೊಂದಿರುವ ತೋಡು ಹರಿಯುತ್ತಿದೆ. ತೋಡಿನ ನೀರಿನ ಹರಿವಿನಿಂದ ಮಣ್ಣಿನ ಸವಕಳಿ ಉಂಟಾಗದಂತೆ ಹಲವು ವಷರ್ಗಳ ಹಿಂದೆ ನಿರ್ಮಿಸಲಾಗಿದ್ದ ತಡೆಗೋಡೆ ದುರ್ಬಲಗೊಂಡು ಒಂದು ಭಾಗ ಸಂಪೂರ್ಣ ಕುಸಿದಿದೆ.
ಕುಸಿದ ಭಾಗಕ್ಕೆ ತಾತ್ಕಾಲಿಕವಾಗಿ ಟರ್ಪಾಲ್ ಅಳವಡಿಸಲಾಗಿದ್ದರೂ, ತಡೆಗೋಡೆಯ ಬುಡದಲ್ಲಿ ಮಣ್ಣು ಸವೆಯುತ್ತಿರುವುದರಿಂದ ಕುಸಿತ ಮತ್ತಷ್ಟು ಹೆಚ್ಚುವ ಆತಂಕ ಎದುರಾಗಿದೆ.
ಮನೆ ಮತ್ತು ತೋಡಿನ ನಡುವೆ ಕೆಲವೇ ಮೀಟರ್‌ಗಳ ಅಂತರವಿದ್ದು, ತಡೆಗೋಡೆ ಮತ್ತಷ್ಟು ಕುಸಿದರೆ ಮನೆಯ ಅಡಿಪಾಯಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ.