ಮೆಲ್ಕಾರ್‌ನ ಬೋಳಂಗಡಿ ಬಳಿ ನಿರ್ವಾಣಗೊಂಡ ಚತುಷ್ಪಥ ಹೆದ್ದಾರಿ.
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಕೆಲವೊಂದು ಜನವಸತಿ ಹಾಗೂ ಜನೋಪಯೋಗಿ ಪ್ರದೇಶಗಳಲ್ಲಿ ಸ್ಥಳೀಯರು ವಾಹನ ತಿರುವು ಪಡೆಯಲು ಕಿಲೋ ಮೀಟರುಗಟ್ಟಲೆ ಸಂಚರಿಸಿ ಪ್ರಯಾಸ ಪಡುವಂತಾಗಿದೆ.
ಮೆಲ್ಕಾರ್ ಸಮೀಪದ ಬೋಳಂಗಡಿ ಪರಿಸರದಲ್ಲಿ ಶಾಲೆ, ಅಂಗನವಾಡಿ, ಮಸೀದಿಗೆ ತೆರಳುವವರು ಹಾಗೂ ಸ್ಥಳೀಯ ನಿವಾಸಿಗಳು ತಮ್ಮ ಮನೆಗಳಿಗೆ ಹೋಗಲು ಒಂದು ಬದಿಯಲ್ಲಿ ಕೆ.ಸಿ ರೋಡ್ ಜಂಕ್ಷನ್‌ಗೆ ಹಾಗೂ ಇನ್ನೊಂದು ಬದಿಯವರು ಮೆಲ್ಕಾರ್ ಜಂಕ್ಷನ್‌ಗೆ ಬರಬೇಕಾದ ಅನಿವಾರ್ಯತೆ ಇದೆ.
ದಟ್ಟ ವಾಹನ ಸಂಚಾರ ಸಂದರ್ಭ ಅಥವಾ ಬಸ್ ಹಿಡಿಯಲು ಜನರು ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುವುದು ಅಸಾಧ್ಯವಾಗಿದ್ದು, ಹೆದ್ದಾರಿ ದಾಟುವ ಸಂದರ್ಭ ವಯೋವೃದ್ದರು, ಅಶಕ್ತರು, ಅನಾರೋಗ್ಯಪೀಡಿತರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಜತೆಗೆ, ಹೆದ್ದಾರಿಯ ಒಂದು ಬದಿಯಲ್ಲಿ ವಾತ್ರ ಪ್ರಯಾಣಿಕರ ತಂಗುದಾಣ ಇದ್ದು, ಇನ್ನೊಂದು ಬದಿಯಲ್ಲಿ ಪ್ರಯಾಣಿಕರ ತಂಗುದಾಣವಿಲ್ಲದೇ ಬಿಸಿಲಿನಲ್ಲಿ ನಿಲ್ಲುವ ಪರಿಸ್ಥಿತಿ ಇದೆ.
ಪಾಣೆಮಂಗಳೂರಿನಲ್ಲೂ ಸಮಸ್ಯೆ
ಪಾಣೆಮಂಗಳೂರು ಸಮೀಪದ ನೆಹರುನಗರ ಎಂಬಲ್ಲಿಯೂ ಇದೇ ಸಮಸ್ಯೆ ಇದ್ದು, ಇಲ್ಲಿನ ನಿವಾಸಿಗಳು ಒಂದು ಕಡೆಯಿಂದ ಬಿ.ಸಿ.ರೋಡು ಮುಖ್ಯವೃತ್ತಕ್ಕೆ ಬಂದು ತಿರುವು ಪಡೆಯಬೇಕು. ಇನ್ನೊಂದು ಬದಿಯಲ್ಲಿ ಪಾಣೆಮಂಗಳೂರು ಕಲ್ಲುರ್ಟಿ ಗುಡಿ ಬಳಿಗೆ ಬಂದು ತಿರುವು ಪಡೆಯುವ ಅನಿವಾರ್ಯತೆ ಇದೆ. ಇಲ್ಲಿಯೂ ಕಿಲೋಮೀಟರುಗಳ ದೂರವಿದ್ದು, ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಸಮಯ ಹಾಗೂ ಹಣ ಪೋಲಾಗುತ್ತಿದೆ.
ಹೆದ್ದಾರಿಯ ಕೆಲವೊಂದು ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸಂಸದ, ಹೆದ್ದಾರಿ ಪ್ರಾಧಿಕಾರ ಹಾಗೂ ಇಲಾಖೆಯ ಅಧಿಕಾರಿಗಳು ಗಮನ ಹರಿಬೇಕಿದ್ದು, ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಶೀಘ್ರವೇ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೆಲ್ಕಾರ್‌ನಿಂದ ಸರ್ವೀಸ್ ರಸ್ತೆಯಲ್ಲಿ ಬರುವ ವಾಹನಗಳು ತಿರುವು ಪಡೆಯಬೇಕಾದರೆ ಕಲ್ಲಡ್ಕದ ಕೆ.ಸಿ.ರೋಡ್ ತನಕ ಹೋಗಬೇಕು. ರಸ್ತೆ ನಿರ್ಮಿಸುವ ವೇಳೆ ಗಮನ ಹರಿಸದ ಕಾರಣ ಈ ಭಾಗದ ಜನರು ನಿತ್ಯ ತೊಂದರೆ ಎದುರಿಸುತ್ತಿದ್ದಾರೆ.