ರಸ್ತೆಯಿಡಿ ಜಲ್ಲಿಕಲ್ಲುಗಳು ಎದ್ದಿರುವುದು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಜಲ್ಲಿಕಲ್ಲು ಎದ್ದು ಹೋಗಿ ರಸ್ತೆ ಸಂಪೂರ್ಣ ಹೊಂಡ ಗುಂಡಿಮಯವಾಗಿದೆ. ಆದರೂ ಜೀವನೋಪಾಯಕ್ಕಾಗಿ ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸಬೇಕು. ರಸ್ತೆ ಅಭಿವೃದ್ಧಿಗೆ ಇಲ್ಲಿಯವರು ಹಲವು ಬಾರಿ ಮನವಿ ಸಲ್ಲಿಸಿ, ಧರಣಿಯನ್ನೂ ನಡೆಸಿದ್ದಾರೆ. ಆದರೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೆ ಸ್ಪಂದಿಸಿಲ್ಲ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸ.
-ಇದು ಮುಳ್ಳುಗುಡ್ಡೆ ಕೊರಳಕಡುವಿನಿಂದ ಗುಡಿಬೆಟ್ಟು, ಹಡಾಳಿ ಹಾಗೂ ಬಲಾಡಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಅಂಪಾರು ಗ್ರಾಪಂ ವ್ಯಾಪ್ತಿಯ 4 ಕಿ.ಮೀ. ರಸ್ತೆಯ ದುಸ್ಥಿತಿ. ರಸ್ತೆ ತುಂಬ ಹೊಂಡ-ಗುಂಡಿಗಳು ನಿರ್ಮಾಣವಾಗಿದ್ದು, ಜಲ್ಲಿಕಲ್ಲು ಎದ್ದು ಹೋಗಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.
ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಮುಳ್ಳುಗುಡ್ಡೆ ಕೊರಳಕಡು ಕ್ರಾಸ್‌ನಿಂದ ಗುಡಿಬೆಟ್ಟು, ಹಡಾಳಿ ಹಾಗೂ ಬಲಾಡಿ ಪ್ರದೇಶಗಳಿಗೆ ಸಂಪರ್ಕಿಸುವ ಈ ರಸ್ತೆಯನ್ನು 15 ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಲಾಗಿತ್ತು. ಮುಂದೆ ಯಾವುದೇ ತೇಪೆ ಕಾರ್ಯವೂ ನಡೆದಿಲ್ಲ.
ಮುಳ್ಳುಗುಡ್ಡೆ- ಗುಡಿಬೆಟ್ಟು, ಹಡಾಳಿ ಹಾಗೂ ಬಲಾಡಿ ಸಂಪರ್ಕಿಸುವ ಈ ರಸ್ತೆಯ ಸುತ್ತಮುತ್ತ 200ಕ್ಕೂ ಹೆಚ್ಚು ಮನೆಗಳಿದ್ದು, ಸ್ಥಳೀಯ ನಿವಾಸಿಗಳು ನಿತ್ಯ ಸಂಚಾರಕ್ಕಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಶಾಲಾ ಮಕ್ಕಳು, ವೃದ್ಧರು, ಕಾರ್ಮಿಕರು ಸೇರಿದಂತೆ ನೂರಾರು ಮಂದಿ ಪ್ರತಿ ದಿನ ಈ ರಸ್ತೆಯಲ್ಲಿ ಕಷ್ಟದಿಂದ ಓಡಾಡಬೇಕಾಗಿದೆ. ಅನಾರೋಗ್ಯಪೀಡಿತರು, ಗರ್ಭಿಣಿಯರನ್ನು ಕರೆದೊಯ್ಯುವಾಗ ಜೀವವೇ ಬಾಯಿಗೆ ಬಂದಂತಾಗುತ್ತದೆ.
ಶೇ.75ರಷ್ಟು ಕೃಷಿ ಅವಲಂಬನೆ
ಇಲ್ಲಿನ ನಿವಾಸಿಗಳಲ್ಲಿ ಶೇ.75ಕ್ಕೂ ಹೆಚ್ಚು ಮಂದಿ ಕೃಷಿ ಅವಲಂಬಿತರು. ಅಡಿಕೆ ಹಾಗೂ ಭತ್ತ ಪ್ರಮುಖ ಬೆಳೆಗಳಾಗಿವೆ. ಕೃಷಿ ಯಂತ್ರೋಪಕರಣಗಳು, ಗೊಬ್ಬರ ಹಾಗೂ ಇತರ ಕೃಷಿ ಸಾಮಗ್ರಿಗಳನ್ನು ಸಾಗಿಸುವುದು ದುಸ್ತರವಾಗುತ್ತದೆ. ರಸ್ತೆ ಹದಗೆಟ್ಟಿರುವುದರಿಂದ ಕೃಷಿ ಚಟುವಟಿಕೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಮತದಾನ ಬಹಿಷ್ಕಾರ ಎಚ್ಚರಿಕೆ
ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಈ ಹಿಂದೆ ಹಲವು ಬಾರಿ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದ್ದು, ರಸ್ತೆ ಮೇಲೆ ಧರಣಿಯೂ ನಡೆದಿದೆ. ಆದರೂ ಸ್ಪಂದನೆ ಇಲ್ಲ. ಮುಂದಿನ ದಿನಗಳಲ್ಲಿ ಮತದಾನ ಬಹಿಷ್ಕಾರಕ್ಕೂ ಹಿಂಜರಿಯುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಮುಳ್ಳುಗುಡ್ಡೆ- ಕೊರಳಕಡು ಪ್ರದೇಶದಲ್ಲಿ ನಿತ್ಯವೂ 12ಕ್ಕೂ ಮಿಕ್ಕಿ ಆಟೋ ರಿಕ್ಷಾ ಚಾಲಕರು ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ಆದರೆ ವ್ಯವ್ಯಸ್ಥಿತ ನಿಲ್ದಾಣವಿಲ್ಲದೆ ಪರದಾಡುತ್ತಿದ್ದಾರೆ. ಕೂಡಲೇ ಸ್ಥಳೀಯಾಡಳಿತ ವ್ಯವಸ್ಥಿತ ಜಾಗ ಗುರುತಿಸಿ ನಿಲ್ದಾಣವನ್ನು ನಿರ್ಮಿಸಬೇಕು.
— ಚಂದ್ರಶೇಖರ್ ರಿಕ್ಷಾ ಚಾಲಕರು