ಬಂಟ್ವಾಳ: ಕಾರಿನಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಸಂಜೆ ಬೆಳ್ತಂಗಡಿ-ಪುಂಜಾಲಕಟ್ಟೆ ಕಡೆಯಿಂದ ಬಂದ ಸ್ವಿಪ್ಟ್ ಕಾರು ಪೊಲೀಸರನ್ನು ಕಂಡು ವೇಗವಾಗಿ ಚಲಾಯಿಸಿದ್ದು, ಕಾರನ್ನು ಪರಿಶೀಲಿಸಿದಾಗ ಎಂಡಿಎಂಎ ಹಾಗೂ ಗಾಂಜಾ ಪತ್ತೆಯಾಗಿದೆ. ಆರೋಪಿಗಳಾದ ನಾಶೀರ್ ಹುಸೇನ್ (37), ಮಹಮ್ಮದ್ ಜುನೈದ್ (38), ಮೊಹಮ್ಮದ್ ಅಫ್ರೀದಿ (24) ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ.
ನಾಶೀರ್ ಹುಸೇನ್ ಸ್ನೇಹಿತರಾದ ಜುನೈದ್ ಮತ್ತು ಅಫ್ರೀದಿ ಅವರೊಂದಿಗೆ ಬೆಂಗಳೂರಿನಿಂದ ಎಂಡಿಎಂಎ ಹಾಗೂ ಗಾಂಜಾ ಖರೀದಿಸಿ ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಒಟ್ಟು 22.57 ಗ್ರಾಂ ಎಂಡಿಎಂಎ, 30.34 ಗ್ರಾಂ ಗಾಂಜಾ ಹಾಗೂ ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ 2 ಲಕ್ಷ ರೂ. ಮೌಲ್ಯದ ಸ್ವಿಪ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ನಗದು, ಮಾದಕ ವಸ್ತುಗಳು, ಮೊಬೈಲ್ ಹಾಗೂ ಕಾರು ಸೇರಿದಂತೆ ಒಟ್ಟು 2,87,312 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಎಂಡಿಎಂಎ ಮಾರಾಟ ಯತ್ನ, ಇಬ್ಬರ ಬಂಧನ
ಮಂಗಳೂರು: ಗೂಡ್‌ಶೆಡ್ ಬಳಿ ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುನ್ನೂರು ಗ್ರಾಮ ಮದನಿ ನಗರದ ಮೊಹಮ್ಮದ್ ಹನಾಸ್ (23) ಹಾಗೂ ಪಡೀಲ್ ಕಣ್ಣೂರು ಗಾಣದ ಬೆಟ್ಟುವಿನ ಮಹಮ್ಮದ್ ರಝೀನ್ (24) ಬಂಧಿತರು. ಖಚಿತ ಮಾಹಿತಿಯಂತೆ ಪಾಂಡೇಶ್ವರ ಠಾಣೆ ಉಪನಿರೀಕ್ಷಕ ಶರಣಪ್ಪ ಭಂಡಾರಿ ಸಿಬ್ಬಂದಿಯೊಂದಿಗೆ ಬುಧವಾರ ಸಂಜೆ 4.20ರ ವೇಳೆಗೆ ಗೂಡ್‌ಶೆಡ್ ಅಂಗಡಿಯೊಂದಕ್ಕೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರ ಬಳಿಯಿಂದ 1,13,000 ರೂ. ಮೌಲ್ಯದ 11.45 ಗ್ರಾಂ. ಎಂಡಿಎಂಎ, ಎರಡು ಮೊಬೈಲ್, ಕಾರು ಮೊದಲಾದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಗೆ ಬೋಳಿಯಾರ್ ನಿವಾಸಿ ಶಾಕೀರ್ ಎಂಬಾತನ ನೀಡಿದ್ದು, ಈತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.