ಉಡುಪಿಯ ಜಿಪಂ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಪ್ರತೀಕ್​ ಬಾಯಲ್​ ಮಾತನಾಡಿದರು. ಸ್ವರೂಪಾ ಟಿ.ಕೆ., ಶ್ರೀವಾಸ್​ ರಾವ್​, ಉದಯಕುಮಾರ್​ ಇದ್ದರು. 
ಉಡುಪಿ

ಕಾಲಮಿತಿಯೊಳಗೆ ನೀಡಿ ನಿಖರ ದತ್ತಾಂಶ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

* ಜಿಲ್ಲಾ ಮಾನವ, ಸುಸ್ಥಿರ ಅಭಿವೃದ್ಧಿ ಯೋಜನೆ ತರಬೇತಿ

ಉಡುಪಿ: ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ- 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ- 2031ರ ವರದಿ ಸಿದ್ಧಪಡಿಸಲು ಅಧಿಕಾರಿಗಳು ಕಾಳಜಿ ವಹಿಸಿ, ಕಾಲಮಿತಿಯೊಳಗೆ ನಿಖರ ದತ್ತಾಂಶ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.
ಉಡುಪಿಯ ಜಿಪಂ ಕಚೇರಿಯಲ್ಲಿರುವ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಅಭಿವೃದ್ಧಿ ವರದಿಗೆ ಸಂಬಂಧಿಸಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೋಮವಾರ (ಜ.19)  ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ಹಂತದಿಂದಲೇ ಆದ್ಯತೆ

ಎರಡೂ ವರದಿಯೂ ಸಹ ಅತಿ ಪ್ರಮುಖವಾದ ದಾಖಲೆಯಾಗಿದ್ದು ಎಲ್ಲ  ಇಲಾಖಾಧಿಕಾರಿಗಳು ತಯಾರಿಕೆಯ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ವರದಿಯು ಗ್ರಾಪಂ ಹಂತದಿಂದಲೇ ಮಾನವ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಇರಬೇಕು. ಶಿಕ್ಷಣ, ಆರೋಗ್ಯ, ಪೋಷಣಾ ಸ್ಥಿತಿ, ಮೂಲಸೌಕರ್ಯ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಪರಿಸರದ ಸುಸ್ಥಿರತೆ ಸೇರಿದಂತೆ ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳ ಆಧಾರದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧಿಸುವುದು ಈ ವರದಿಗಳ ಗುರಿಯಾಗಿದೆ ಎಂದರು.

ಪೂರಕ ಮಾಹಿತಿ ನೀಡಿ

ಜಿಪಂ ಸಿಇಒ ಪ್ರತೀಕ್​ ಬಾಯಲ್​ ಮಾತನಾಡಿ, ಎರಡೂ ವರದಿಗಳನ್ನು ಸಲ್ಲಿಸುವಾಗ ಎಲ್ಲ ಇಲಾಖೆಗಳ ಅಧಿಕಾರಿಗಳು ಸಂಬಂಧಪಟ್ಟ ಮಾಹಿತಿಯೊಂದಿಗೆ ಭಾಗವಹಿಸಬೇಕು. ಪೂರಕ ಮಾಹಿತಿಯನ್ನೂ ಸಹ ನೀಡಬೇಕು. ಈ ವರದಿಗೆ ಹೆಚ್ಚಿನ ಬೇಡಿಕೆಯಿದ್ದು, ಅದು ಭವಿಷ್ಯದಲ್ಲಿ ಯೋಜನೆ ರೂಪಿಸಲು ಮಾದರಿ ಆಗಿರುತ್ತದೆ. ಈ ಸಾಲಿನ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಭಿನ್ನವಾಗಿದ್ದು, ಸುಸ್ಥಿರ ಅಭಿವೃದ್ಧಿ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಜಂಟಿ ನಿರ್ದೇಶಕ ಶ್ರೀನಿವಾಸ್​ ರಾವ್​ ಮಾತನಾಡಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಉದಯಕುಮಾರ್​, ಯೋಜನೆಯ ಅನುಷ್ಠಾನಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.