ಪೋಕ್ಸೋ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಕುರಿತು ನಡೆದ ತರಬೇತಿ ಕಾರ್ಯಕ್ರಮ. 
ಉಡುಪಿ

ಮಕ್ಕಳ ಸುರಕ್ಷತಾ ನೀತಿ ಸಮರ್ಪಕ ಅನುಷ್ಠಾನ ಅಗತ್ಯ : ಡಾ. ತಿಪ್ಪೇಸ್ವಾಮಿ

ಉಡುಪಿ: ಸರ್ಕಾರ ಮಕ್ಕಳ ರಕ್ಷಣೆಗಾಗಿ ಜಾರಿಗೆ ತಂದಿರುವ ನೀತಿ ನಿಯಮಾವಳಿಗಳು ತಳಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.

ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಕುರಿತು ಮಕ್ಕಳು ಹಾಗೂ ಮಕ್ಕಳ ರಕ್ಷಣಾಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಶಾಲೆಗೆ ಬಂದು ಮರಳಿ ಮನೆಗೆ ಹೋಗುವವರೆಗೆ ಶಿಕ್ಷಕರು ಅವರ ಕಾನೂನಾತ್ಮಕ ಪೋಷಕರಾಗಿರುತ್ತಾರೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಸುರಕ್ಷತೆಯ ಬಗ್ಗೆಯೂ ಗಮನಹರಿಸಬೇಕು. ಮಕ್ಕಳ ಸುರಕ್ಷತೆ ತುರ್ತು ಆದ್ಯತೆಯ ವಿಷಯ. ಮಕ್ಕಳ ರಕ್ಷಣಾ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ತರಬೇತಿ ಸಹಕಾರಿ. ಮಕ್ಕಳ ರಕ್ಷಣಾಧಿಕಾರಿಗಳಿಗೆ ಬಾಲ ನ್ಯಾಯ ಕಾನೂನಿನ ಅರಿವು ಇರಬೇಕು. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣಾ ಕಾನೂನು ಅನುಫಿ್ಠಾನ ಉತ್ತಮವಾಗಿದೆ ಎಂದರು.

ರಾಜ್ಯ ಸರ್ಕಾರವು ಮಕ್ಕಳ ರಕ್ಷಣಾ ನೀತಿ ಅನ್ವಯ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ, ಅಪರಾಧ ತಡೆಗಟ್ಟುವುದು, ಮತ್ತು ಬಾಲ ನ್ಯಾಯ ಕಾಯ್ದೆ 2015ರ ಅಂಶಗಳನ್ನು ಒಳಗೊಂಡಿದೆ. ಈ ನೀತಿಯನ್ವಯ ರಾಜ್ಯದ 31 ಜಿಲ್ಲೆಗಳ ಎಲ್ಲಾ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಆಯಾ ಶಾಲೆಯ ಒಂದು ಶಿಕ್ಷಕರು ಮತ್ತು ಎರಡು ವಿದ್ಯಾರ್ಥಿಗಳನ್ನು ಮಕ್ಕಳ ರಕ್ಷಣಾಧಿಕಾರಿಯಾಗಿ ನೇಮಿಸಲಾಗಿದೆ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಸ್ಥಳಿಯವಾಗಿ ಅನುಷ್ಠಾನಗೊಳಿಸಿ ಮಕ್ಕಳ ಸುರಕ್ಷತೆಯನ್ನು ಕಾಪಾಡಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ವಕೀಲ ವೈ.ಟಿ. ರಾಘವೇಂದ್ರ ಬಾಲ ನ್ಯಾಯ ಕಾಯ್ದೆ ಕುರಿತು ಮಾಹಿತಿ ನೀಡಿದರು. ಶಾಲಾ ಶಿಕ್ಷಣ ಇಲಾಖೆಯ ಚಂದ್ರಶೇಖರ್​, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಮಾರುತಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನ ನಾಯಕ್​ ಮತ್ತಿತರರು ಉಪಸ್ಥಿತರಿದ್ದರು.