ಶಾಸಕ ಯಶ್ಪಾಲ್ ಎ. ಸುವರ್ಣ ಆಡಳಿತ ನಿರ್ವಹಣೆ ಕುರಿತ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿ: ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 25 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಜಿಲ್ಲೆಯ ಮೀನುಗಾರರು ಹೆಚ್ಚಿನ ಪ್ರಯೋಜನ ಪಡೆಯುವಂತಾಗಬೇಕು. ಈ ಬಗ್ಗೆ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕಿನ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗಾಗಿ ಆಯೋಜಿಸಿದ್ದ ಆಡಳಿತ ನಿರ್ವಹಣೆ ಕುರಿತ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೀನುಗಾರಿಕೆ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವ ಕ್ಷೇತ್ರವಾಗಿದ್ದು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಶಿಬಿರದಲ್ಲಿ ಪಾಲ್ಗೊಂಡು, ಸರ್ಕಾರದ ಹೊಸ ಯೋಜನೆಗಳ ಮಾಹಿತಿಯನ್ನು ಮೀನುಗಾರರಿಗೆ ತಲುಪಿಸಬೇಕು. ಆಗ ಮಾತ್ರ ಯೋಜನೆಯ ಪ್ರಯೋಜನ ಮೀನುಗಾರರಿಗೆ ಸಿಗುತ್ತದೆ ಎಂದು ಹೇಳಿದರು.
ಮೀನುಗಾರರಿಗೆ ನಿಗದಿತ ಕೆಲಸದ ಸಮಯ ಇರುವುದಿಲ್ಲ. ಆದ್ದರಿಂದ ಅಧಿಕಾರಿಗಳು ಅವರ ಅನುಕೂಲದ ಸಮಯದಲ್ಲಿ ಭೇಟಿ ನೀಡಿ ಯೋಜನೆಗಳ ಮಾಹಿತಿ ನೀಡಬೇಕು. ಜಿಲ್ಲೆಯ 70ಕ್ಕೂ ಹೆಚ್ಚು ಮೀನುಗಾರರ ಸಹಕಾರಿ ಸಂಘಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವ ಕಾರ್ಯ ನಡೆಸಬೇಕು ಎಂದು ಸಲಹೆ ನೀಡಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಅಲೆವೂರು ಹರೀಶ್ ಕಿಣಿ ಹಾಗೂ ಎಚ್. ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು. ಮೀನುಗಾರಿಕಾ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಅವರು ಮೀನುಗಾರಿಕಾ ಇಲಾಖೆಯ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಸಂತೋಷ್ ಶೆಟ್ಟಿ ಅವರು ಒತ್ತಡ ನಿರ್ವಹಣೆ ಮತ್ತು ಸಮಯ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.