ಹೆಬ್ರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಡಾ.ಭಾರ್ಗವಿ ಆರ್.ಐತಾಳ್, ಗುರುದಾಸ ಶೆಣೈ, ಸುಬ್ರಹ್ಮಣ್ಯ ಜಿ.ಕುರ್ಯ, ನರೇಂದ್ರ ಎಸ್.ಮರಸಣಿಗೆ, ಬಾಲಕೃಷ್ಣ ಮಲ್ಯ, ಯೋಗೀಶ ಭಟ್, ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.
ಹೆಬ್ರಿ: ಮಾನವನ ಅತಿಯಾದ ಹಸ್ತಕ್ಷೇಪದಿಂದ ಪಶ್ಚಿಮಘಟ್ಟದಲ್ಲಿ ಬರಗಾಲ, ಭೂಕುಸಿತ, ದುರಂತ ನಡೆಯುತ್ತಿದೆ. ಸರ್ಕಾರ ಪಶ್ಚಿಮಘಟ್ಟದಲ್ಲಿ ಹೇರುವ ಯೋಜನೆಗಳನ್ನು ಸಾರ್ವಜನಿಕರು ವಿರೋಧಿಸಬೇಕು. ಪಶ್ಚಿಮಘಟ್ಟ ನೆಮ್ಮದಿಯಲ್ಲಿದ್ದರೆ ದಕ್ಷಿಣ ಭಾರತವೇ ನೆಮ್ಮದಿಯಲ್ಲಿರುತ್ತದೆ ಎಂದು ಅಂತಾರಾಷ್ಟ್ರೀಯ ಕಲಾವಿದ ದಿನೇಶ್ ಹೊಳ್ಳ ಹೇಳಿದರು.
ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಅಮೃತ ಭಾರತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ‘ಪಶ್ಚಿಮಘಟ್ಟ ಉಳಿಸುವಲ್ಲಿ ಮಾಧ್ಯಮಗಳ ಹೊಣೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್, ಹೆಬ್ರಿ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಮಾತನಾಡಿದರು.
ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರೇಂದ್ರ ಎಸ್.ಮರಸಣಿಗೆ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಅಮೃತ ಭಾರತಿ ಟ್ರಸ್ಟ್ ಪ್ರಮುಖರಾದ ಬಾಲಕೃಷ್ಣ ಮಲ್ಯ, ಯೋಗೀಶ ಭಟ್, ರಾಮಕೃಷ್ಣ ಆಚಾರ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ಕುಮಾರ್ ಶೆಟ್ಟಿ, ಅಮೃತ ಭಾರತಿ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಮುನಿಯಾಲ್, ಕೋಶಾಧಿಕಾರಿ ಸುಮಲತಾ ಹೆಬ್ಬಾರ್ ಉಪಸ್ಥಿತರಿದ್ದರು. ಮಡಾಮಕ್ಕಿ ವೇದವ್ಯಾಸ ತಂತ್ರಿ ನಿರೂಪಿಸಿದರು. ಸಂಜೀವ ಆರ್ಡಿ ವಂದಿಸಿದರು.
ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕಿ ಹೆಬ್ರಿ ಪತ್ರಕರ್ತರ ಸಂಘದ ಸದಸ್ಯೆ ಧನ್ವಿ ಹೆಬ್ಬಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 25 ವರ್ಷಗಳಿಂದ ಪತ್ರಿಕಾ ವಿತರಕರಾಗಿರುವ ಹೆಬ್ರಿಯ ಮಾಧವ ನಾಯಕ್ ಅವರನ್ನು ಗೌರವಿಸಲಾಯಿತು.