ಅಪಾಯಕಾರಿಯಾಗಿರುವ ಕಿರಿದಾದ ತೊಕ್ಕೊಟ್ಟುಉಳ್ಳಾಲ ರಸ್ತೆ.
ಅತ್ಯಂತ ಕಿರಿದಾದ ರಾಜರಸ್ತೆ, ಬಾಯ್ದೆರೆದಿರುವ ಮೇಲ್ಸೇತುವೆಯ ತಡೆಬೇಲಿ... ಕಿಂಚಿತ್ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಬೀಳುವ ಭೀತಿ... ಇದು ತೊಕ್ಕೊಟ್ಟು-ಉಳ್ಳಾಲ ಸಂಪರ್ಕ ರಸ್ತೆಯಲ್ಲಿ ನಿತ್ಯ ಸವಾರರು ಎದುರಿಸುತ್ತಿರುವ ವಾಸ್ತವ ಚಿತ್ರಣ...
ತೊಕ್ಕೊಟ್ಟು ಸರ್ವೀಸ್ ರಸ್ತೆಯ ಮೂಲಕ ಉಳ್ಳಾಲಕ್ಕೆ ಸಾಗುವ ವಾಹನಗಳ ಅಸ್ತವ್ಯಸ್ತ ಸಂಚಾರದಿಂದಾಗಿ ಇಲ್ಲಿ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇತ್ತೀಚೆಗೆ ಆಂಬುಲೆನ್ಸ್ ಹಾಗೂ ರೋಗಿಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಮಸ್ಯೆಯ ಗಂಭೀರತೆ ಅರಿತ ಸಚಿವ ಯು.ಟಿ.ಖಾದರ್ ಅವರು ಸಂಚಾರಿ ಪೊಲೀಸರು, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಏಕಮುಖ ಸಂಚಾರಕ್ಕೆ ಸೂಚಿಸಿದ್ದರು. ಇದರ ಬೆನ್ನಲ್ಲೇ, ಉಳ್ಳಾಲಕ್ಕೆ ತೆರಳುವ ವಾಹನಗಳು ಕಾಪಿಕಾಡ್‌ವರೆಗೆ ಸಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯಲು ಹಾಗೂ ತೊಕ್ಕೊಟ್ಟು ಒಳಪೇಟೆಗೆ ತೆರಳುವ ವಾಹನಗಳು ಉಳ್ಳಾಲಬೈಲ್‌ನಲ್ಲಿ ಯೂ-ಟರ್ನ್ ತೆಗೆದುಕೊಳ್ಳಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಯಿತು. ಆದಾಗ್ಯೂ, ರಸ್ತೆಯ ಮೂಲ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಆತಂಕ ಸೃಷ್ಟಿಸಿರುವ ಕಿರುಸೇತುವೆಗಳು
ಉಳ್ಳಾಲ ತಿರುವಿನಲ್ಲಿ ರೈಲ್ವೆ ಇಲಾಖೆಗೆ ಸೇರಿದ ಎರಡು ಕಿರುಸೇತುವೆಗಳಿವೆ. ರಸ್ತೆ ಸಾಕಷ್ಟು ಎತ್ತರದಲ್ಲಿದ್ದು, ಕೆಳಭಾಗದಲ್ಲಿ ಜನವಸತಿ ಮನೆಗಳು, ರೈಲ್ವೆ ಹಳಿ ಹಾಗೂ ಸೋಮೇಶ್ವರ ಸಂಪರ್ಕ ರಸ್ತೆಯಿದೆ. ಕಿರಿದಾದ ರಸ್ತೆಯ ಅಂಚಿನಲ್ಲೇ ಬೃಹತ್ ಕುಡಿಯುವ ನೀರಿನ ಪೈಪ್‌ಗಳು ಹಾದುಹೋಗಿದ್ದು, ಸೂಕ್ತ ತಡೆಗೋಡೆ ಇಲ್ಲದೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ.
ಪ್ರಮುಖ ಸಂಪರ್ಕ ಕೊಂಡಿ
ಉಳ್ಳಾಲ ದರ್ಗಾ, ಶ್ರೀ ಚೀರುಂಭ ಭಗವತಿ ಕ್ಷೇತ್ರ, ಉಳ್ಳಾಲ ಬೀಚ್ ಹಾಗೂ ಸೋಮೇಶ್ವರ ದೇವಸ್ಥಾನ-ಕಡಲತೀರಗಳಿಗೆ ಇದು ಪ್ರಮುಖ ಸಂಪರ್ಕ ಕೊಂಡಿ. ಹಬ್ಬ-ಹರಿದಿನ ಹಾಗೂ ಜಾತ್ರಾ ಮಹೋತ್ಸವಗಳ ಸಂದರ್ಭ ಇಲ್ಲಿ ವಾಹನ ದಟ್ಟಣೆ ಮಿತಿಮೀರುತ್ತದೆ. ಕಳೆದ ವರ್ಷ ಉರುಸ್ ಸಂದರ್ಭ ರಸ್ತೆಯ ಎರಡೂ ಬದಿಗಳಲ್ಲಿ ಇಂಟರ್‌ಲಾಕ್ ಅಳವಡಿಸಿದ್ದರಿಂದ ಸ್ವಲ್ಪಮಟ್ಟಿನ ಸುಗಮ ಸಂಚಾರಕ್ಕೆ ಅನುಕೂಲವಾಗಿತ್ತು.
ರಸ್ತೆಯ ಕೆಳಭಾಗದಲ್ಲಿ ಮನೆಗಳಿರುವುದರಿಂದ ಇಕ್ಕೆಲಗಳಲ್ಲಿ ಮಣ್ಣು ಭರ್ತಿ ಮಾಡಿ ಬಲಿಷ್ಠ ತಡೆಗೋಡೆ ನಿರ್ಮಿಸಬೇಕಿದೆ. ಇದಕ್ಕಾಗಿ 30 ಕೋಟಿ ಅನುದಾನ ನಿಗದಿಯಾಗಿದ್ದು, ಡಿಪಿಆರ್ ಸಿದ್ಧವಾಗಬೇಕಿದೆ. ರೈಲ್ವೆ ಇಲಾಖೆಯ ವ್ಯಾಪ್ತಿಗೆ ಬರುವ ಎರಡು ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಮಂಜೂರಾಗಿದೆ. ಎರಡೂ ಸೇತುವೆ ಕಾಮಗಾರಿಗಳು ಏಕಕಾಲದಲ್ಲಿ ನಡೆಯಲಿವೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಉಳ್ಳಾಲದ ಪ್ರಸಿದ್ಧ ಧಾರ್ಮಿಕ ತಾಣಗಳು ಹಾಗೂ ಬೀಚ್‌ಗಳಿಗೆ ದೂರದೂರುಗಳಿಂದ ಭಕ್ತರು-ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರಸಿದ್ಧ ಚೀರುಂಭ ಭಗವತಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬ್ರಹ್ಮಕಲಶ ಹಾಗೂ ಭರಣಿ ಮಹೋತ್ಸವ ನಡೆಯಲಿದ್ದು, ಅದಕ್ಕೂ ಮುನ್ನ ತೊಕ್ಕೊಟ್ಟು ಓವರ್‌ಬ್ರಿಡ್ಜ್ ಬಳಿಯ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ತುರ್ತಾಗಿ ಪೂರ್ಣಗೊಳ್ಳಬೇಕು.
— ಚಿದಾನಂದ ನಂದ್ಯ ಗುರಿಕಾರ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರ ಅಧ್ಯಕ್ಷ
ಉಳ್ಳಾಲ ಸಂಪರ್ಕ ರಸ್ತೆ ಈಗಾಗಲೇ ಉತ್ತಮಗೊಂಡಿದ್ದರೂ, ಓವರ್‌ಬ್ರಿಡ್ಜ್ ಬಳಿ ರಸ್ತೆ ಅಗಲೀಕರಣ ಅನಿವಾರ್ಯ. ಇಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯೂ ಇರುವುದರಿಂದ ಇದು ಭಿನ್ನವಾಗಿದೆ. ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
— ಫಾರೂಕ್ ಸಾಮಾಜಿಕ ಕಾರ್ಯಕರ್ತ